ADVERTISEMENT

ಮುಖವಾಡಗಳ ಹಿಂದಿನ ಕಥೆ ಹೇಳುವ ಅದಿತಿ ಗ್ಯಾಲರಿ: ಜಿಲ್ಲಾಧಿಕಾರಿ ಕೂರ್ಮಾರಾವ್

ಜೂನ್ 19ರವರೆಗೆ ಸಾರ್ವಜನಿಕರಿಗೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 13:59 IST
Last Updated 17 ಜೂನ್ 2022, 13:59 IST
ಉಡುಪಿಯ ಅದಿತಿ ಆರ್ಟ್‌ ಗ್ಯಾಲರಿಯಲ್ಲಿ ಆಯೋಜಿಸಿರುವ ಮುಖವಾಡಗಳ ಪ್ರದರ್ಶವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಉದ್ಘಾಟಿಸಿ ಮುಖವಾಡಗಳನ್ನು ವೀಕ್ಷಿಸಿದರು.
ಉಡುಪಿಯ ಅದಿತಿ ಆರ್ಟ್‌ ಗ್ಯಾಲರಿಯಲ್ಲಿ ಆಯೋಜಿಸಿರುವ ಮುಖವಾಡಗಳ ಪ್ರದರ್ಶವನ್ನು ಜಿಲ್ಲಾಧಿಕಾರಿ ಕೂರ್ಮಾರಾವ್ ಉದ್ಘಾಟಿಸಿ ಮುಖವಾಡಗಳನ್ನು ವೀಕ್ಷಿಸಿದರು.   

ಉಡುಪಿ: ಪ್ರತಿಯೊಂದು ಪ್ರದೇಶವೂ ವಿಭಿನ್ನವಾದ ಕಲೆಯನ್ನು ಹೊಂದಿದ್ದು ಕಲಾ ಕೌಶಲವನ್ನು ಜನರಿಗೆ ಪರಿಚಯಿಸುವ ಕಾರ್ಯವಾಗಬೇಕು. ಉಡುಪಿಯ ಅದಿತಿ ಆರ್ಟ್‌ ಗ್ಯಾಲರಿ ವಿಭಿನ್ನ ಕಲಾ ಕೌಶಲವನ್ನು ಜನರಿಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.

ನಗರದ ಕುಂಜಿಬೆಟ್ಟುವಿನಲ್ಲಿರುವ ಅದಿತಿ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾಗಿರುವ 50ಕ್ಕೂ ಹೆಚ್ಚು ದೇಶಗಳ ಜಾನಪದ ಮುಖವಾಡಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆಯ ಬಗ್ಗೆ ವ್ಯಾಮೋಹವುಳ್ಳ ಕಲಾತ್ಮಕ ಕಾರ್ಯಕ್ರಮಗಳು ಹಾಗೂ ಕಲಾ ಚಟುವಟಿಕೆಗಳು ನಿರಂತರವಾಗಿ ಮುಂದುವರಿಯಲಿ. ಉಡುಪಿಯಲ್ಲಿಯೂ ಯಕ್ಷಗಾನ ಕಲೆಗೆ ವಿಭಿನ್ನ ಹಾಗೂ ಸುಂದರ ಮುಖವರ್ಣಿಕೆಗಳನ್ನು ಬಳಸುತ್ತಿದ್ದು ಅವುಗಳ ಪರಿಚಯವೂ ಆಗಬೇಕಿದೆ ಎಂದು ಆಶಿಸಿದರು.

ಕಲೋಪಾಸಕ ಅರವಿಂದ ವ್ಯಾಸರಾಯ ಬಲ್ಲಾಳ್ ಮಾತನಾಡಿ, ಅದಿತಿ ಆರ್ಟ್ ಗ್ಯಾಲರಿ ಕಲೆಗೆ ಉತ್ತಮ ವೇದಿಕೆ ಒದಗಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಡಾ.ಕಿರಣ್ ಆಚಾರ್ಯ ದೇಶ-ವಿದೇಶಗಳಿಗೆ ಸಂಚರಿಸಿ ಕಲಾಚಟುವಟಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಅಪರೂಪದ ಮುಖವಾಡಗಳ ಸಂಗ್ರಹ ಮಾಡಿರುವುದು ಶ್ಲಾಘನೀಯ ಎಂದರು.

ADVERTISEMENT

ಹಿರಿಯ ಪತ್ರಿಕಾ ಛಾಯಾಚಿತ್ರ ಗ್ರಾಹಕ ಆಸ್ಟ್ರೋ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಮನುಷ್ಯ ಅಂತರಂಗವನ್ನು ಬಹಿರಂಗಗೊಳಿಸಲು ಸದಾ ಉತ್ಸುಕನಾಗಿರುತ್ತಾರೆ. ಆದರೆ, ಕೆಲವೊಮ್ಮೆ ಅಂತರಂಗವನ್ನು ಪೂರ್ತಿಯಾಗಿ ಬಹಿರಂಗಪಡಿಸಲು ಸಾದ್ಯವಾಗದೆ ಮುಖವಾಡಗಳನ್ನು ಧರಿಸುವುದು ಅನಿವಾರ್ಯವಾಗುತ್ತದೆ ಎಂದರು.

ಅದಿತಿ ಗ್ಯಾಲರಿಯ ವಿಶ್ವಸ್ಥರಾದ ಡಾ.ಕಿರಣ್ ಆಚಾರ್ಯ ಅವರ ವಿದೇಶಗಳ ಪ್ರವಾಸ ಜೀವನೋತ್ಸಾಹವನ್ನು ಕಲಿಸುತ್ತದೆ. ನೂರಾರು ದೇಶಗಳ ಜಾನಪದ ಕಲಾ ವೈಶಿಷ್ಟ್ಯವನ್ನು ಸಂಗ್ರಹಿಸಿ ಅದನ್ನು ಕರಾವಳಿಯ ಜನರಿಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದರು.

ಯೂನಿಯನ್ ಬ್ಯಾಂಕ್‌ನ ಎಜಿಎಂ ರೋಸಲಿನ್ ರೋಡ್ರಿಗಸ್ ಇದ್ದರು. ಅದಿತಿ ಗ್ಯಾಲರಿಯ ಆಡಳಿತ ವಿಶ್ವಸ್ಥ ಡಾ. ಕಿರಣ್ ಆಚಾರ್ಯ ಸ್ವಾಗತಿಸಿದರು. ಪ್ರತಿಮಾ ಆಚಾರ್ಯ ವಂದಿಸಿದರು.

ಅದಿತಿ ಆರ್ಟ್ ಗ್ಯಾಲರಿಯಲ್ಲಿ ಜೂನ್ 19ರವರೆಗೆ ಮುಖವಾಡಗಳ ಪ್ರದರ್ಶನ ನಡೆಯಲಿದ್ದು, ದಕ್ಷಿಣ ಅಮೆರಿಕ, ಇಟಲಿ, ಶ್ರೀಲಂಕಾ, ಬರ್ಮಾ, ನೇಪಾಳ, ಆಫ್ರಿಕಾ ಸೇರಿದಂತೆ 50 ದೇಶಗಳ ನೂರೈವತ್ತಕ್ಕೂ ಅಧಿಕ ಜಾನಪದ ಮುಖವಾಡಗಳ ಪ್ರದರ್ಶನ ಇರಲಿದೆ.

ಮುಖವಾಡಗಳ ಅಧ್ಯಯನ ಮಾಡುವ ಆಸಕ್ತರಿಗಾಗಿ ಮುಖವಾಡಗಳ ಸಂಕ್ಷಿಪ್ತ ವಿವರಣೆ ಲಭ್ಯವಿದೆ. ಭೂತಾನ್‌ನ ಭೈರವ ವುಡ್, ಮಣಿಪುರದ ಮರದಿಂದ ಮಾಡಿದ ಮುಖವಾಡ, ಕರಾವಳಿ ಯಕ್ಷಗಾನ, ಒಡಿಶಾ ಪುರಿ ಪಟಚಿತ್ರ ಮುಖವಾಡ, ಲಡಾಕ್‌ನ ಭಾರತ ವಿಧೂಷಕ ನೀಲಿ ಮರ, ನೇಪಾಳದ ವ್ಯಾಪಾರಿ ಮರ, ಮಂಗೋಲಿಯಾ ಪೂರ್ವಜರ ಮುಖವಾಡಗಳು ಗಮನಸೆಳೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.