
ಪಡುಬಿದ್ರಿ: ಅಕ್ಕ ಮಾರಾಟ ಮಳಿಗೆ, ಐಸ್ ಕ್ರೀಮ್, ಕೃತಕ ಆಭರಣ, ತುಪ್ಪ, ಹಾಲು ಬ್ರ‍್ಯಾಂಡ್ ಪ್ರಾರಂಭಿಸಿದಲ್ಲಿ ಪಂಚಾಯಿತಿ ವತಿಯಿಂದ ಉಚಿತ ಜಾಗದ ವ್ಯವಸ್ಥೆ ಮಾಡಿ ಕೌಶಲ ತರಬೇತಿ ಕೇಂದ್ರ ಮತ್ತು ಮಾರಾಟ ಮಳಿಗೆಗೆ ಅವಕಾಶ ನೀಡಲಾಗುವುದು. ಬೆಳಪುವಿನ ಅಕ್ಕ ಪ್ರೊಡಕ್ಟ್ ನಂಬರ್ 1 ಆಗಬೇಕು ಎಂಬುದು ನಮ್ಮ ಆಶಯ ಎಂದು ಎಂದು ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರಿಗೆ ರುಡ್‌ಸೆಟ್ ಸಂಸ್ಥೆ ಬ್ರಹ್ಮಾವರದ ವತಿಯಿಂದ ಕೃತಕ ಆಭರಣಗಳ ತಯಾರಿ, ಅಲಂಕಾರಿಕ ವಸ್ತುಗಳ ತಯಾರಿ ಮತ್ತು ಸೀರೆಗಳಿಗೆ ಕುಚ್ಚು ಹಾಕುವ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶ ವಿಶ್ವದಲ್ಲಿ ಮೊದಲ ಸ್ಥಾನ ಪಡೆಯಬೇಕಾದರೆ ಮಹಿಳೆಯರು ಸ್ವತಂತ್ರವಾಗಿ ಬದುಕು ಮಾಡುವ ಮಟ್ಟಿಗೆ ಬೆಳೆಯಬೇಕು. ಮಹಿಳಾ ಶಕ್ತಿ ದೇಶದ ಶಕ್ತಿಯಾಗಬಲ್ಲದು . ಬೆಳಪುವಿನ ಮಹಿಳೆಯರ ಸುಮಾರು 27 ಜನರ ತಂಡ ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯ ಸಹಕಾರದೊಂದಿಗೆ ಅದ್ವಿತೀಯ ಸಾಧನೆ ಮಾಡುವ ಮೂಲಕ ಸ್ವಂತ ಉದ್ದಿಮೆ ಸ್ಥಾಪಿಸಿದೆ. ತಾವು ತಯಾರಿಸಿದ ವಸ್ತುಗಳಿಗೆ ಅಗಾಧ ಮಾರುಕಟ್ಟೆಯಿದೆ ಎಂದರು.
ಮಹಿಳೆಯರು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವುದು ನಮ್ಮ ಕಣ್ಣ ಮುಂದಿದೆ. ಮಹಿಳೆಗೆ ಭಾರತದಲ್ಲಿ ಮಾತೆಯ ಸ್ಥಾನಮಾನವಿದೆ. ಇಂದು ಮಹಿಳೆ ಕುಟುಂಬ ನಿರ್ವಹಣೆಯ ಜವಾಬ್ದಾರಿಯೊಂದಿಗೆ ವ್ಯವಹಾರ ಜ್ಞಾನವನ್ನು ವೃದ್ಧಿಸಿಕೊಂಡು ಆರ್ಥಿಕ ಸಬಲೀಕರಣವಾಗಿದ್ದಾರೆ. ಇದಕ್ಕೆ ಕಾರಣ ಸ್ವಸಹಾಯ ಸಂಘಗಳು ಎಂದರು.
ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಡಿಸೋಜ, ಕಾರ್ಯದರ್ಶಿ ಚಂದ್ರಾವತಿ ವಿ.ಆಚಾರ್ಯ, ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಬೊಮ್ಮಯ್ಯ, ಉಪನ್ಯಾಸಕರಾದ ಸಂತೋಷ್ ಶೆಟ್ಟಿ, ಪ್ರದೀಪ್, ಬೆಳಕು ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಹಪ್ಸ, ಸ್ವಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.