ADVERTISEMENT

ಅಪ್ಪಣ್ಣ ಹೆಗ್ಡೆ ಬದುಕು ತೆರೆದ ಪುಸ್ತಕ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಬಸ್ರೂರು ಅಪ್ಪಣ್ಣ ಹೆಗ್ಡೆ ಅವರಿಗೆ ಕೋ.ಮ.ಕಾರಂತ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 4:38 IST
Last Updated 6 ಅಕ್ಟೋಬರ್ 2025, 4:38 IST
ಕುಂದಾಪುರ ಸಮೀಪದ ಬಸ್ರೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರಿಗೆ ಕೋ.ಮ.ಕಾರಂತ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುಂದಾಪುರ ಸಮೀಪದ ಬಸ್ರೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರಿಗೆ ಕೋ.ಮ.ಕಾರಂತ್ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ಕುಂದಾಪುರ: ಅರ್ಜಿ ಹಾಕಿ, ಪ್ರಭಾವ ಬಳಸಿ, ಹಣ ನೀಡಿ ಪ್ರಶಸ್ತಿ ಪಡೆದುಕೊಳ್ಳುವ ಪ್ರಸ್ತುತ ಕಾಲಘಟ್ಟದಲ್ಲಿ ತೆರೆದಿಟ್ಟ ಪುಸ್ತಕದಂತೆ ಆದರ್ಶ ಬದುಕನ್ನು ರೂಪಿಸಿಕೊಂಡಿರುವ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರಿಗೆ ಕೋ.ಮ.ಕಾರಂತ್ ಪ್ರಶಸ್ತಿ ಹುಡುಕಿಕೊಂಡು ಬಂದಿರುವುದು ಪ್ರಶಸ್ತಿ ಮೌಲ್ಯ ಹೆಚ್ಷಿಸಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಣ್ಣಿಸಿದರು.

ಬಸ್ರೂರಿನಲ್ಲಿ ಭಾನುವಾರ ಕುಂದಪ್ರಭ ಸಂಸ್ಥೆ ಆಯೋಜಿಸಿದ್ದ ಕೋ.ಮ.ಕಾರಂತ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ಕುರಿತಾದ ವಿಶೇಷ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಅಜಾತಶತ್ರು ವ್ಯಕ್ತಿತ್ವದ ಅಪ್ಪಣ್ಣ ಹೆಗ್ಡೆ ಅವರ ನಡೆ– ನುಡಿ ಯುವ ಸಮುದಾಯಕ್ಕೆ ಪಠ್ಯವಾಗಬೇಕು. ಕೇಂದ್ರ ಸರ್ಕಾರ ನೀಡುವ ಪದ್ಮ ಪ್ರಶಸ್ತಿಗಳು ಪ್ರಸ್ತುತ ಅರ್ಜಿ ಹಾಕದೆ ಅರ್ಹರನ್ನು ತಲುಪುತ್ತಿರುವುದು ಹೊಸ ಮನ್ವಂತರದ ಪರಿವರ್ತನೆಯ ಭಾಗವಾಗಿದೆ. ಪ್ರಶಸ್ತಿಗಳು ಈ ರೀತಿಯಲ್ಲಿ ಪ್ರದಾನವಾದಾಗ ಮಾತ್ರ ಅದರ ಮೌಲ್ಯ ಹೆಚ್ಚಾಗುತ್ತದೆ ಎಂದರು.

ADVERTISEMENT

ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಎಲ್ಲಾ ಕಾಲ, ಎಲ್ಲಾ ವಯೋಮಾನ, ಎಲ್ಲಾ ವಿಷಯಗಳ ಬಗ್ಗೆ ಮಾತನಾಡಬಲ್ಲ, ಪ್ರವರ್ಧಮಾನದ ಬೆಳವಣಿಗೆ ಸರಿತೂಗಿಸಿ ಅನುಭವ ಹಂಚಿಕೊಳ್ಳುವ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಜಿಲ್ಲೆಯ ಧಾರ್ಮಿಕ ರಾಯಭಾರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು, ಪ್ರಶಸ್ತಿ, ಸನ್ಮಾನಗಳು ಜವಾಬ್ದಾರಿ ಹೆಚ್ಚಿಸುತ್ತವೆ. 91ರ ಇಳಿ ವಯಸ್ಸಿನಲ್ಲಿ ಇರುವ ನನ್ನಿಂದ ಮಾರ್ಗದರ್ಶನ ಮಾಡಲು ಮಾತ್ರ ಸಾಧ್ಯ. ಕನ್ನಡದ ಭಾಷೆ, ನೆಲ– ಜಲದ ಬಗ್ಗೆ ಕನ್ನಡಿಗರು ಕಟಿಬದ್ಧರಾಗಬೇಕು. ಮಾತೃ ಭಾಷೆಯನ್ನು ಉಳಿಸಿ ಬೆಳೆಸುವ ಮೂಲಕ ಅಬ್ಬಿ ಭಾಷಿಯ ಋಣ ತೀರಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಸ್ಥಾಪಕಾಧ್ಯಕ್ಷ ಎ.ಎಸ್‌.ಎನ್.ಹೆಬ್ಬಾರ್, ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ್ ಪುತ್ರನ್,‌ ನಿವೃತ್ತ ಉಪನ್ಯಾಸಕ ಕೋ.ಶಿವಾನಂದ ಕಾರಂತ್, ಕುಂಭಾಸಿ ಆನೆಗುಡ್ಡೆ ವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯ, ರಾಮ್‌ರತನ್ ಹೆಗ್ಡೆ, ರಾಮ್‌ಕಿಶನ್ ಹೆಗ್ಡೆ, ಅನುಪಮಾ ಎಸ್. ಶೆಟ್ಟಿ, ನಿರುಪಮಾ ಹೆಗ್ಡೆ, ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ ಭಾಗವಹಿಸಿದ್ದರು. ಕುಂದಪ್ರಭ ಸಂಸ್ಥೆಯ ಯು.ಎಸ್.ಶೆಣೈ ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ದಿನಕರ್ ಆರ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಡುಬಿದ್ರಿ ಜಯವಂತ್ ಪೈ ಪ್ರಾರ್ಥಿಸಿದರು. ಎಚ್. ಸೋಮಶೇಖರ ಶೆಟ್ಟಿ ವಂದಿಸಿದರು.

ಉತ್ತಮ ವ್ಯಕ್ತಿತ್ವ ‌ಹಾಗೂ ಬದ್ಧತೆಯ ಬದುಕನ್ನು ಕಟ್ಟಿಕೊಂಡಿರುವ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ಸಮಾಜಮುಖಿ ಕೈಂಕರ್ಯಗಳಿಗೆ ಹಲವು ಪ್ರಶಸ್ತಿಗಳು ಬರಬೇಕಿತ್ತು.
-ಆನಂದ ಸಿ. ಕುಂದರ್, ಗೀತಾನಂದ ಫೌಂಡೇಷನ್ ಪ್ರವರ್ತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.