ADVERTISEMENT

ಪಡುಬಿದ್ರಿ ಬೀಚ್‌ಗೆ ಬ್ಲೂ ಫ್ಲ್ಯಾಗ್ ಗರಿಮೆ; ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ

ವಿದೇಶಿ ಪ್ರವಾಸಿಗರನ್ನು ಸೆಳೆಯಲಿದೆ ಉಡುಪಿ

ಪ್ರಜಾವಾಣಿ ವಿಶೇಷ
Published 11 ಅಕ್ಟೋಬರ್ 2020, 19:30 IST
Last Updated 11 ಅಕ್ಟೋಬರ್ 2020, 19:30 IST
ಪಡುಬಿದ್ರಿಯ ಬೀಚ್‌ನ ದೃಶ್ಯಪ್ರಜಾವಾಣಿ ಚಿತ್ರ: ಹಮೀದ್‌ ಪಡುಬಿದ್ರಿ
ಪಡುಬಿದ್ರಿಯ ಬೀಚ್‌ನ ದೃಶ್ಯಪ್ರಜಾವಾಣಿ ಚಿತ್ರ: ಹಮೀದ್‌ ಪಡುಬಿದ್ರಿ   

ಪಡುಬಿದ್ರಿ (ಉಡುಪಿ): ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪರಿಸರ ಸ್ನೇಹಿ ವಾತಾವರಣ ಹಾಗೂ ಸುರಕ್ಷತಾ ಸೌಲಭ್ಯಗಳನ್ನು ಹೊಂದಿರುವ ವಿಶ್ವದ ಸ್ವಚ್ಛ ಕಡಲತೀರಗಳಿಗೆ ನೀಡಲಾಗುವ ಪ್ರತಿಷ್ಠಿತ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರ ಪಡುಬಿದ್ರಿ ಬೀಚ್‌ಗೆ ಲಭ್ಯವಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ‘ಬ್ಲೂ ಫ್ಲ್ಯಾಗ್’ ಗರಿಮೆ ಮಹತ್ವದ ಪಾತ್ರ ವಹಿಸಲಿದೆ.

ವಿಶ್ವ ಭೂಪಟದಲ್ಲಿ ಪಡುಬಿದ್ರಿ ಬೀಚ್‌: ಬ್ಲೂ ಫ್ಲ್ಯಾಗ್ ಮಾನ್ಯತೆ ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದ್ದು, ಪಡುಬಿದ್ರಿ ಕಡಲತೀರವು ವಿಶ್ವ ಬ್ಲೂ ಫ್ಲ್ಯಾಗ್ ಭೂಪಟದಲ್ಲಿ ಅಚ್ಚೊತ್ತಲಿದೆ. ಇದರೊಂದಿಗೆ ವಿದೇಶಿ ಪ್ರವಾಸಿಗರು ಉಡುಪಿಯತ್ತ ಮುಖ ಮಾಡಲಿದ್ದಾರೆ.

ಮಾನ್ಯತೆ ಸಿಕ್ಕಿದ್ದು ಹೇಗೆ: 2018ರಲ್ಲಿ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯವು ದೇಶದ ಅತ್ಯುತ್ತಮವಾದ 12 ಬೀಚ್‌ಗಳನ್ನು ಆಯ್ಕೆಮಾಡಿ ‘ಬ್ಲೂ ಫ್ಲ್ಯಾಗ್‌’ ಪ್ರಮಾಣಪತ್ರ ಪಡೆಯಲು ಡೆನ್ಮಾರ್ಕ್‌ನ ಫೌಂಡೇಷನ್‌ ಫಾರ್‌ ಎನ್ವಿರಾನ್‌ಮೆಂಟಲ್‌ ಎಜುಕೇಷನ್‌ ಸಂಸ್ಥೆಗೆ ಪ್ರಸ್ತಾವ ಸಲ್ಲಿಸಿತ್ತು. ಪಟ್ಟಿಯಲ್ಲಿ ಉಡುಪಿಯ ಪಡುಬಿದ್ರಿ ಹಾಗೂ ಹೊನ್ನಾವರದ ಕಾಸರಕೋಡ್‌ ಬೀಚ್ ಸಹ ಸೇರಿತ್ತು.

ADVERTISEMENT

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಬೀಚ್‌ಗಳನ್ನು ಅಂತರರಾಷ್ಟ್ರೀಯ ದರ್ಜೆಗೆ ಅನುಗುಣವಾಗಿ ಅಭಿವೃದ್ಧಿ ಮಾಡಲಾಗಿತ್ತು. ಕೇಂದ್ರದ ನಿರ್ಣಾಯಕ ಮಂಡಳಿ, ಪರಿಸರ ತಜ್ಞರು ಹಾಗೂ ವಿಜ್ಞಾನಿಗಳನ್ನೊಳಗೊಂಡ ರಾಷ್ಟ್ರೀಯ ಸ್ವತಂತ್ರ ತಂಡವು ಕಡಲ ತೀರಗಳನ್ನು ಪರಿಶೀಲಿಸಿ, ದೇಶದ 8 ಬೀಚ್‌ಗಳನ್ನು ಆಯ್ಕೆ ಮಾಡಿ ಡೆನ್ಮಾರ್ಕ್‌ನ ಅಂತರರಾಷ್ಟ್ರೀಯ ನಿರ್ಣಾಯಕ ಮಂಡಳಿಗೆ ಪ್ರಮಾಣ ಪತ್ರ ಸಲ್ಲಿಸಿತ್ತು.

ಬಳಿಕ ಎಫ್‌ಇಇ ಸಂಸ್ಥೆಯ ಪ್ರತಿನಿಧಿಗಳು ಖುದ್ದು ಭೇಟಿನೀಡಿ ಪರಿಶೀಲಿಸಿ ಮೌಲ್ಯಮಾಪನ ನಡೆಸಿದ್ದರು. ಅದರಂತೆ, ಉಡುಪಿ ಜಿಲ್ಲೆಯ ಪಡುಬಿದ್ರಿ, ಹೊನ್ನಾವರದ ಕಾಸರಕೋಡ್ ಸಹಿತ ದೇಶದ ಎಂಟು ಬೀಚ್‌ಗಳಿಗೆ ಎಫ್‌ಇಇ ಅಧಿಕೃತವಾಗಿ ಬ್ಲೂ ಫ್ಲ್ಯಾಗ್ ಪ್ರಮಾಣಪತ್ರ ಘೋಷಿಸಿದೆ. ಶೀಘ್ರವೇ ಪಡುಬಿದ್ರಿ ಬೀಚ್‌ನಲ್ಲಿ ಬ್ಲೂ ಫ್ಲ್ಯಾಗ್ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಮೊದಲ ಪ್ರಯತ್ನದಲ್ಲೇ ದೇಶದ ಎಂಟೂ ಬೀಚ್‌ಗಳಿಗೆ ಪ್ರಮಾಣಪತ್ರ ದೊರೆತಿರುವುದು ಇದೇ ಮೊದಲು.

600 ಮೀಟರ್ ಬ್ಲೂ ಫ್ಲ್ಯಾಗ್‌: ಕಾಮಿನಿ ನದಿಯು ಸಮುದ್ರ ಸೇರುವ ಪಡುಬಿದ್ರಿ ಎಂಡ್ ಪಾಯಿಂಟ್‌ನ 300 ಮೀಟರ್ ಕಡಲ ತೀರವನ್ನು ‘ಬ್ಲೂ ಫ್ಲ್ಯಾಗ್’ ಬೀಚ್ ಆಗಿ ಪರಿವರ್ತಿಸಲಾಗಿದೆ. ಕೇಂದ್ರ ಸರ್ಕಾರದ ₹ 8 ಕೋಟಿ ಹಾಗೂ ರಾಜ್ಯ ಸರ್ಕಾರದ ₹ 2.60 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ.

ಏನೇನು ಸೌಲಭ್ಯಗಳಿವೆ: ಪರಿಸರ ಶಿಕ್ಷಣ, ನಿರ್ವಹಣೆ ಹಾಗೂ ಸುರಕ್ಷತಾ ಕ್ರಮಗಳಿಗೆ ಅನುಗುಣವಾಗಿ ಬೀಚ್‌ನಲ್ಲಿ ಜೈವಿಕ ಶೌಚಾಲಯಗಳ ನಿರ್ಮಾಣ, ಬಟ್ಟೆ ಬದಲಿಸುವ ಕೋಣೆಗಳು, ಸ್ನಾನದ ಕೋಣೆಗಳು, ಅಂಗವಿಕಲರಿಗೆ ಪ್ರತ್ಯೇಕ ಶೌಚಾಲಯ, 100 ಮೀಟರ್‌ ಸೇಫ್‌ ಸ್ವಿಮಿಂಗ್ ಝೋನ್‌, ವಾಚ್‌ ಟವರ್‌ಗಳ ನಿರ್ಮಾಣ, 24 ಗಂಟೆ ಭದ್ರತೆ, ಹಸಿ ಹಾಗೂ ಒಣ ಕಸ ವಿಂಗಡಣಾ ಸೌಲಭ್ಯ, ಸೋಲಾರ್ ವಿದ್ಯುತ್ ದೀಪಗಳ ಅಳವಡಿಕೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಮಕ್ಕಳು ಆಡಲು ಆಟಿಕೆ, ಪ್ರಥಮ ಚಿಕಿತ್ಸಾ ಕೊಠಡಿ, ಸೂಚನಾ ಫಲಕಗಳ ಅಳವಡಿಕೆ, ಹಸಿರು ಹುಲ್ಲುಹಾಸು, ಜಾಗಿಂಗ್ ಟ್ರ್ಯಾಕ್ ಮತ್ತು ಮನರಂಜನಾ ಚಟುವಟಿಕೆ, ಘನತ್ಯಾಜ್ಯ ಸಂಯೋಜನೆ ಮತ್ತು ಮರು ಬಳಕೆಯ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ಶುದ್ಧ ಕುಡಿಯುವ ನೀರಿನ ಘಟಕ, ಕೂರಲು ಆಸನಗಳನ್ನು ಬೀಚ್‌ನಲ್ಲಿ ಅಳವಡಿಸಲಾಗಿದೆ.

ಯಾಕಿಷ್ಟು ಮಹತ್ವ?
ವಿದೇಶಿ ಪ್ರವಾಸಿಗರು ಬ್ಲೂಫ್ಲ್ಯಾಗ್‌ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬೀಚ್‌ಗಳಿಗೆ ಪ್ರವಾಸ ಮಾಡಲು ಹೆಚ್ಚಾಗಿ ಬಯಸುತ್ತಾರೆ. ಪರಿಸರ ಸ್ನೇಹಿ ವಾತಾವರಣ, ನೀರಿನ ಗುಣಮಟ್ಟ, ಭದ್ರತೆ ಹಾಗೂ ಕಡಲತೀರದ ಹವಾಗುಣ ಬ್ಲೂ ಫ್ಲಾಗ್ ಬೀಚ್‌ಗಳ ಆಯ್ಕೆಗೆ ಮುಖ್ಯ ಕಾರಣ. ನೆರೆ ರಾಜ್ಯಗಳ ಪ್ರವಾಸಿಗರೂ ಸಹ ಹೆಚ್ಚು ಭೇಟಿ ನೀಡುವುದರಿಂದ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿರುವ ಎಲ್ಲ ಕ್ಷೇತ್ರಗಳೂ ಅಭಿವೃದ್ಧಿಯಾಗಲಿವೆ ಎನ್ನುತ್ತಾರೆ ಪ್ರವಾಸೋದ್ಯ ಇಲಾಖೆ ಸಹಾಯಕ ನಿರ್ದೇಶಕ ಚಂದ್ರ ಶೇಖರ್ ನಾಯಕ್‌.

ಪಡುಬಿದ್ರಿ ಆಯ್ಕೆಯಾಗಿದ್ದು ಹೇಗೆ?
ಕೇಂದ್ರ ಸರ್ಕಾರ ಬ್ಲೂಫ್ಲ್ಯಾಗ್ ಮಾನ್ಯತೆಗಾಗಿ ಬೀಚ್‌ಗಳ ಪಟ್ಟಿ ನೀಡಲು ಆಯಾ ರಾಜ್ಯಗಳಿಗೆ ಸೂಚಿಸಿತ್ತು. ಅದರಂತೆ ಕರಾವಳಿಯ ಸಂಭಾವ್ಯ ಬೀಚ್‌ಗಳ ಪಟ್ಟಿ ತಯಾರಿಸಿ, ಮಲ್ಪೆ, ಪಡುಕೆರೆ, ಪಡುಬಿದ್ರಿ ಬೀಚ್‌ಗಳನ್ನು ಜಿಲ್ಲೆಯಿಂದ ಆಯ್ಕೆಮಾಡಿ ಕಳುಹಿಸಲಾಗಿತ್ತು. ನೀರಿನ ಗುಣಮಟ್ಟ, ರಾಸಾಯನಿಕ ಅಂಶಗಳು, ಮೈಕ್ರೋ ಬಯಾಲಜಿಕಲ್ ಅಂಶಗಳ ಆಧಾರದ ಮೇಲೆ ಅಂತಿಮವಾಗಿ ಪಡುಬಿದ್ರಿ ಬೀಚ್‌ ಆಯ್ಕೆಯಾಯಿತು. ಇಲ್ಲಿನ ಗುಣಮಟ್ಟದ ನೀರು, ಸರ್ಕಾರಕ್ಕೆ ಸೇರಿದ ಜಾಗ, ಬಂಗಾರದ ಬಣ್ಣದ ಮರಳು ಸೇರಿದಂತೆ ಅಂತರಾಷ್ಟ್ರೀಯ ಮಾನದಂಡಗಳು ಸುಲಭವಾಗಿ ಬ್ಲೂ ಫ್ಲ್ಯಾಗ್‌ ಮಾನ್ಯತೆ ದೊರೆತಿದೆ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.