ADVERTISEMENT

ನಾರಾಯಣಗುರು ನಿಗಮ ಮಂಡಳಿಗೆ ₹500 ಕೋಟಿ: ಸಚಿವ ಮಧು ಬಂಗಾರಪ್ಪ

ಬ್ರಹ್ಮಾವರ ಬಿಲ್ಲವ ಸಮಾಜ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 13:39 IST
Last Updated 17 ಸೆಪ್ಟೆಂಬರ್ 2023, 13:39 IST
ಬ್ರಹ್ಮಾವರದಲ್ಲಿ ನಡೆದ ಬ್ರಹ್ಮಾವರದ ಬಿಲ್ಲವರ ಸಮಾಜ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಶಿಲಾನ್ಯಾಸ ನೇರವೇರಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು
ಬ್ರಹ್ಮಾವರದಲ್ಲಿ ನಡೆದ ಬ್ರಹ್ಮಾವರದ ಬಿಲ್ಲವರ ಸಮಾಜ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಶಿಲಾನ್ಯಾಸ ನೇರವೇರಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು   

ಬ್ರಹ್ಮಾವರ: ‘ನಾರಾಯಣಗುರು ನಿಗಮ ಮಂಡಳಿಗೆ ಸರ್ಕಾರ ₹500 ಕೋಟಿ ನೀಡಲು ಯೋಜನೆ ನಿರ್ಮಿಸಿ, ಮುಖ್ಯಮಂತ್ರಿ ಅವರಲ್ಲಿ ಬೇಡಿಕೆ ಇಡಲಾಗುವುದು. ಅನುದಾನ ಬಿಡುಗಡೆಗೆ ಎಲ್ಲ ಪ್ರಯತ್ನ ಮಾಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಭಾನುವಾರ ಬ್ರಹ್ಮಾವರದ ಬಿಲ್ಲವರ ಸಮಾಜ ಸೇವಾ ಸಂಘದ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಶಿಲಾನ್ಯಾಸ ನೇರವೇರಿಸಿ ಅವರು ಮಾತನಾಡಿದರು.

‘ನಿಗಮಕ್ಕೆ ಅನುದಾನ ಒದಗಿಸುವ ಜವಾಬ್ದಾರಿ ನನ್ನದು. ಪಕ್ಷಬೇಧ ಮರೆತು ಸಮಾಜದ ಏಳಿಗೆಗೆ ಅನುದಾನ ಮತ್ತು ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸುವ ಭರವಸೆ ನೀಡಿದ ಅವರು, ನಾರಾಯಣಗುರು ಜಯಂತಿ, ಅಧ್ಯಯನ ಪೀಠ ಸ್ಥಾಪನೆ ಮತ್ತು ಪಠ್ಯ ಪುಸ್ತಕದಲ್ಲಿ ನಾರಾಯಣಗುರುಗಳ ಬಗ್ಗೆ ಪಾಠ ಹೀಗೆ ನಾರಾಯಣಗುರುಗಳ ತತ್ವ ಸಿದ್ಧಾಂತವನ್ನು ಮುಂದಿನ ಜನಾಂಗಕ್ಕೆ ಕೊಡಿಸುವ ಕೆಲಸ ಈ ಮೂಲಕ ಆಗುತ್ತಿದೆ’ ಎಂದರು.

ADVERTISEMENT

ಸಂಘದ ಅಧ್ಯಕ್ಷ ಬಿ.ಎನ್‌.ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಸೋಲೂರು ಮಠ ಆರ್ಯ ಈಡಿಗ ಸಮಾಜದ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಮಾಜಿ ಸಚಿವರಾದ ವಿನಯ ಕುಮಾರ ಸೊರಕೆ, ಕೋಟ ಶ್ರೀನಿವಾಸ್‌ ಪೂಜಾರಿ, ಶಾಸಕರಾದ ಯಶಪಾಲ್‌ ಸುವರ್ಣ, ಸುನಿಲ್‌ ಕುಮಾರ್‌, ಬೈಂದೂರಿನ ಮಾಜಿ ಶಾಸಕ ಗೋಪಾಲ ಪೂಜಾರಿ, ಪ್ರಮುಖರಾದ ಹರೀಶ್‌ ಅಮೀನ್‌, ರಾಜಶೇಖರ್‌ ಕೋಟ್ಯಾನ್‌, ಸಂಕಪ್ಪ ಎ, ಪ್ರವೀಣ ಪೂಜಾರಿ, ನವೀನ್‌ ಪೂಜಾರಿ ಇದ್ದರು.

ಇದೇ ಸಂದರ್ಭದಲ್ಲಿ ಮಧು ಬಂಗಾರಪ್ಪ, ಯಶಪಾಲ್‌ ಸುವರ್ಣ ಅವರನ್ನು ಸನ್ಮಾನಿಸಲಾಯಿತು.

ರಾಜ್ಯ ಅತ್ಯುತ್ತಮ ಶಿಕ್ಷಕ ಪುರಸ್ಕೃತ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಅಧ್ಯಾಪಕ ನರೇಂದ್ರ ಕುಮಾರ್‌ ಕೋಟ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಸುನೀತಾ ಲೋಕನಾಥ ಕೋಟ್ಯಾನ್ ಅವರನ್ನು ಗೌರವಿಸಲಾಯಿತು.‌

ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಮಾಜ ಬಾಂಧವರನ್ನು ಗುರುತಿಸಲಾಯಿತು.

ಜಯಂತಿಗೆ ಖೊಕ್‌

‘ಮಹಾ ಪುರುಷರ ದಿನಾಚರಣೆಗೆ ಸರ್ಕಾರಿ ರಜೆ ನೀಡಿದಲ್ಲಿ ಮಹಾಪುರುಷರನ್ನು ಮರೆತು ರಜೆಯ ಮಜಾ ಹೆಚ್ಚುತ್ತದೆ. ನಾರಾಯಣ ಗುರುಗಳು ಸೇರಿದಂತೆ ಮಹಾತ್ಮರ ಜನ್ಮ ದಿನಾಚರಣೆಯಂದು ಶಾಲಾ ಕಾಲೇಜಿನಲ್ಲಿ ಅವರ ಕುರಿತು ಮಾಹಿತಿ ಮತ್ತು ಸಾಧನೆ ಹೇಳುವಂತಾಗಬೇಕು. ಆದ್ದರಿಂದ ಮುಂದಿನ ದಿನಗಳಲ್ಲಿ ಹಲವರ ಜಯಂತಿಗಳಿಗೆ ರಜೆ ಕೊಡುವ ಸಂಪ್ರದಾಯ ಕೈಬಿಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.