ADVERTISEMENT

ಬ್ರಹ್ಮಾವರ| ಆತ್ಮವಿಶ್ವಾಸ ಬೆಳೆಸುವ ಸಂಘಟನೆಗಳು: ಸುಪ್ರಭಾ ಕೆ.ಆರ್‌

ಸಾಲಿಗ್ರಾಮ ರಜತ ಸಿರಿ ಸಂಭ್ರಮಕ್ಕೆ ಸುಪ್ರಭಾ ಚಾಲನೆ; ಮನಮುದಗೊಳಿಸಿದ ರಜತ ಸಿರಿ ಸೌರಭ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 4:27 IST
Last Updated 22 ಡಿಸೆಂಬರ್ 2025, 4:27 IST
ಮಹಿಳಾ ವೇದಿಕೆಯ ರಜತ ಸಿರಿ ಸಂಭ್ರಮದಲ್ಲಿ ವಿದುಷಿ ಪವನ ಬಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು 
ಮಹಿಳಾ ವೇದಿಕೆಯ ರಜತ ಸಿರಿ ಸಂಭ್ರಮದಲ್ಲಿ ವಿದುಷಿ ಪವನ ಬಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು    

ಸಾಲಿಗ್ರಾಮ(ಬ್ರಹ್ಮಾವರ): ಮಹಿಳೆಯರು ಇಂದು ಎಲ್ಲ ಕ್ಷೇತ್ರದಲ್ಲೂ ಮುಂದೆ ಇದ್ದು, ಸ್ವಾವಲಂಬಿ ಬದುಕನ್ನು ನಡೆಸುವ ಶಕ್ತಿ ಹೊಂದಿದ್ದಾರೆ. ಆತ್ಮವಿಶಾಸ ಬೆಳೆಸುವ ಸಂಘಟನೆಗಳಿಂದ ಅವರಿಗೆ ವೇದಿಕೆ ಲಭ್ಯವಾಗುತ್ತಿರುವುದು ಶ್ಲಾಘನೀಯ ಎಂದು ಸುರತ್ಕಲ್‌ ಎನ್‌ಐಟಿಕೆಯ ಸಹಾಯಕ ಪ್ರಾಧ್ಯಾಪಕಿ ಸುಪ್ರಭಾ ಕೆ.ಆರ್‌ ಹೇಳಿದರು.

ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ, ಕೂಟ ಮಹಾಜಗತ್ತು ಸಾಲಿಗ್ರಾಮ ಹಾಗೂ ಯುವ ವೇದಿಕೆಯ ಸಹಯೋಗದಲ್ಲಿ ಸಾಲಿಗ್ರಾಮದ ಕೂಟ ಮಹಾ ಜಗತ್ತು ಅಂಗ ಸಂಸ್ಥೆಯಾದ ಮಹಿಳಾ ವೇದಿಕೆಯ ರಜತ ಸಿರಿ ಸಂಭ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎಸ್‌ ಕಾರಂತ ಮಾತನಾಡಿ ಸಂಘಟನೆ ಧಾನ್ಯ ಸಂಗ್ರಹದ ತಿರಿ ಇದ್ದ ಹಾಗೆ. ಈ ತಿರಿಯ ಅಡಿಪಾಯ ಹಿರಿಯರು. ಅವರು ಮಾಡಿಕೊಟ್ಟ ಈ ಸಂಘಟನೆಯನ್ನು ಸರಿ ದಾರಿಯಲ್ಲಿ ಮುಂದುವರಿಸಿಕೊಂಡು ಹೋಗಲು ವಿಶೇಷ ಶ್ರಮ ಅಗತ್ಯ ಎಂದರು.

ADVERTISEMENT

ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋದಾ ಸಿ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ವೈದ್ಯೆ ಡಾ.ಶ್ರುತಿ ಬಲ್ಲಾಳ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಎಚ್‌.ಸತೀಶ ಹಂದೆ, ಸಾಲಿಗ್ರಾಮ ಅಂಗ ಸಂಸ್ಥೆಯ ಅಧ್ಯಕ್ಷ ಪಿ.ಸಿ.ಹೊಳ್ಳ ಪಾಲ್ಗೊಂಡಿದ್ದರು.

ಮಹಿಳಾ ವೇದಿಕೆಯ ರಜತ ಸಿರಿ ಸಂಭ್ರಮದ ‘ರಜತ ಸಿರಿ’ ಬಿಡುಗಡೆಗೊಳಿಸಲಾಯಿತು. ಮಣಿಪಾಲ ಕಲಾ ಸ್ಪಂದನದ ನಿರ್ದೇಶಕಿ ವೀಣಾ ವಿದುಷಿ ಪವನ ಬಿ ಆಚಾರ್ಯ, ಕೋಟ ಮೂಡುಗಿಳಿಯಾರಿನ ಸರ್ವ ಕ್ಷೇಮ ಆಸ್ಪತ್ರೆ ಮತ್ತು ರಿಸರ್ಚ್‌ಫೌಂಡೇಷನ್‌ನ ಮುಖ್ಯ ವೈದ್ಯಾಧಿಕಾರಿ ಡಾ.ಮಾನಸ ವಿ ಉಡುಪ ಅವರನ್ನು ಸನ್ಮಾನಿಸಲಾಯಿತು.

ಯಶೋಧ ಸಿ ಹೊಳ್ಳ ಸ್ವಾಗತಿಸಿದರು. ಕಾರ್ಯದರ್ಶಿ ಲತಾ ಹೊಳ್ಳ ವಂದಿಸಿದರು. ಸುಜಾತ ಬಾಯರಿ ಮತ್ತು ನಾಗರತ್ನ ಹೇರ್ಳೆ ನಿರೂಪಿಸಿದರು.

ರಜತ ಸಿರಿ ಕಾರ್ಯಕ್ರಮದಲ್ಲಿ 25 ಜನರಿಗೆ ಲಕ್ಕಿಡಿಪ್‌, 25 ಮಂದಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ರಜತ ಸಿರಿ ಸೌರಭ, ವೀಣಾ ಗುರು ಸುಮಂಗಲಿ ನಾವಡ, ಸುಷ್ಮಾ ಐತಾಳ ಮತ್ತು ರಮಾ ಎಸ್‌.ಎನ್‌ಉಪಾಧ್ಯ ಅವರ ಮುಂದಾಳುತ್ವದಲ್ಲಿ ಪಾರಂಪಳ್ಳಿಯ ಕಲಾಶ್ರೀ ಸಂಗೀತ ಶಾಲೆ ಮತ್ತು ಬ್ರಹ್ಮಾವರದ ರಾಗ ತಾಳ ಕಲಾ ಶಾಲೆಯ 25 ಜನರಿಂದ ವೀಣಾ ವಾದನ ಗಮನ ಸೆಳೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.