ADVERTISEMENT

ಕಾಂಗ್ರೆಸ್ ಮುಖಂಡನ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:33 IST
Last Updated 31 ಜನವರಿ 2026, 7:33 IST
ಕಾಪುವಿನ ದಿವಾಕರ ಶೆಟ್ಟಿ ಅವರ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ ಕಳವುಗೈದಿದ್ದಾರೆ.
ಕಾಪುವಿನ ದಿವಾಕರ ಶೆಟ್ಟಿ ಅವರ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ ಕಳವುಗೈದಿದ್ದಾರೆ.   

ಕಾಪು (ಪಡುಬಿದ್ರಿ): ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸಹಿತ ಬೆಳ್ಳಿಯ ಸಾಮಾಗ್ರಿಗಳು ಕಳ್ಳತನ ಆಗಿದ್ದು, ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿವಾಕರ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಶುಭ ಕಾರ್ಯಕ್ಕಾಗಿ ಮುಂಬಯಿಗೆ ತೆರಳಿದ್ದರು. ಮಧ್ಯರಾತ್ರಿಯ ನಂತರ ಮನೆಯ ಮುಖ್ಯ ದ್ವಾರದ ದಾರಂದ ಮುರಿದು ಒಳ ನುಗ್ಗಿದ ಕಳ್ಳರು, ಮನೆಯನ್ನು ಜಾಲಾಡಿದ್ದಾರೆ. ಸಿ.ಸಿ.ಟಿ.ವಿ. ಕ್ಯಾಮೆರಾದ ದಿಕ್ಕನ್ನು ಬದಲಿಸಿರುವ ಕಳ್ಳರು ಡಿವಿಆರ್ ಅನ್ನು ಕೊಂಡೊಯ್ದಿದ್ದಾರೆ.

ಕಪಾಟಿನಲ್ಲಿದ್ದ ಸುಮಾರು 30 ಗ್ರಾಂ ಚಿನ್ನಾಭರಣ, ಸುಮಾರು ₹9 ಲಕ್ಷ ನಗದು, ಬೆಳ್ಳಿಯ ತಂಬಿಗೆಗಳು, ₹3 ಲಕ್ಷ ಮೌಲ್ಯದ 3 ವಾಚ್ ಗಳು, ಸುಮಾರು 300 ಗ್ರಾಂ ತೂಕದ ಬೆಳ್ಳಿಯ ಹರಿವಾಣಗಳು ಸಹಿತ ₹ 19.05 ಲಕ್ಷ ಮೌಲ್ಯದ ಸೊತ್ತುಗಳು ಕಳವಾಗಿವೆ.

ADVERTISEMENT

ಮೇಲಿನ ಮಹಡಿಯಲ್ಲಿ ಅವರ ನಿಕಟ ವ್ಯಕ್ತಿ ಮಲಗಿದ್ದರು. ಕಳ್ಳತನ ಆದ ವಿಷಯ ಅವರ ಗಮನಕ್ಕೆ ಬಂದಿರಲಿಲ್ಲ. ಅವರು ಮಲಗಿದ್ದ ಕೋಣೆಗೂ ಕಳ್ಳರು ಬಂದು ಜಾಲಾಡಿದ್ದಾರೆ. ಆದರೂ ಅವರಿಗೆ ಕಳ್ಳತನದ ಅರಿವಿಗೆ ಬರಲಿಲ್ಲ. ಕಳ್ಳರು ಅವರ ಮೊಬೈಲ್ ಕೊಂಡೊಯ್ದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊಬೈಲ್ ಪತ್ತೆಯಾಗಿದೆ. ಮುಂಜಾನೆ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಬಂದ ಶ್ವಾನದಳ ನೇರವಾಗಿ ಪಕ್ಕದ ಒಳ ರಸ್ತೆಯಾಗಿ ಮುಂದೆ ಸಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಡಿವೈಎಸ್ಪಿ ಡಿ.ಟಿ. ಪ್ರಭು, ಸರ್ಕಲ್‌ ಇನ್‌ಸ್ಪೆಕ್ಟರ್‌ ಅಜ್ಮತ್ ಅಲಿ, ಎಸ್‌ಐ ತೇಜಸ್ವಿ, ಬೆರಳಚ್ಚು ವಿಭಾಗದ ಇನ್‌ಸ್ಪೆಕ್ಟರ್ ಮೋಹಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೇವಸ್ಥಾನದ ಕಾಣಿಕೆ ಡಬ್ಬಿಗಳ ನಗದು ಕಳವು: ಪಡುಬಿದ್ರಿಯ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ತಡರಾತ್ರಿ ಕಳ್ಳರು ಪ್ರವೇಶಿಸಿ ₹1500 ನಗದನ್ನು ಕಳವು ಮಾಡಿದ್ದಾರೆ.

ಕಳ್ಳರು ಎರಡು ಕಾಣಿಕೆ ಡಬ್ಬಿಗಳು, ಒಂದು ಕಾಲು ದೀಪ ಹಾಗೂ ಒಂದು ಮೆಟ್ಟುಕತ್ತಿಗಳನ್ನು ಹೊರಗೊಯ್ದು, ಸಮೀಪದ ನೀರಿರುವ ತೊರೆಯೊಂದರಲ್ಲಿ ಕಾಲು ದೀಪ, ಮೆಟ್ಟುಕತ್ತಿಗಳನ್ನು ಬಳಸಿ ಡಬ್ಬಿಗಳನ್ನು ಒಡೆದು ನಗದು ಕಳವು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.