ADVERTISEMENT

ಉಡುಪಿ: ಸುಮಾರು ₹2 ಕೋಟಿ ವೆಚ್ಚದ ಚಿನ್ನದ ಭಗವದ್ಗೀತೆ ಜ.8ರಂದು ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 4:28 IST
Last Updated 6 ಜನವರಿ 2026, 4:28 IST
ಚಿನ್ನದಲ್ಲಿ ತಯಾರಿಸಿರುವ ಭಗವದ್ಗೀತೆ
ಚಿನ್ನದಲ್ಲಿ ತಯಾರಿಸಿರುವ ಭಗವದ್ಗೀತೆ   

ಉಡುಪಿ: ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಅಂಗವಾಗಿ ದೆಹಲಿಯ ಶ್ರೀಕೃಷ್ಣ ಭಕ್ತರೊಬ್ಬರು ಸುಮಾರು ₹2 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿರುವ ಚಿನ್ನದ ಭಗವದ್ಗೀತಾ ಹೊತ್ತಗೆಯ ಲೋಕಾರ್ಪಣೆ ಇದೇ 8ರಂದು ಸಂಜೆ 5 ಗಂಟೆಗೆ ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆಯಲಿದೆ.

ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಚಿನ್ನದ ಹಾಳೆಯಲ್ಲಿ ಮುದ್ರಿಸಲಾಗಿದೆ.  

‘ಹೊತ್ತಗೆಯನ್ನು ಚಿನ್ನದ ರಥದಲ್ಲಿ ಮೆರವಣಿಗೆ ಮೂಲಕ ಕೃಷ್ಣ ಸನ್ನಿಧಿಗೆ ತಂದು, ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಪರ್ಯಾಯ ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟ್ ವಿಶ್ವಸ್ಥ ಅನಿಲ್ ಮಿಶ್ರಾ, ಪಂಢರಪುರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಗಹನೀನಾಥ ಜ್ಞಾನೇಶ್ವರ ಮಹಾರಾಜ್ ಔಶೇಕರ್, ಆಳಂದ ಜ್ಞಾನೇಶ್ವರ ಮಹಾರಾಜ್ ಪೀಠದ ಪ್ರಧಾನ ಅರ್ಚಕ ಗಿರೀಶ್ ತುಕ್ರಿ ಪಾಲ್ಗೊಳ್ಳುವರು ಎಂದು ಅವರು ಹೇಳಿದ್ದಾರೆ.

ಆಟೊ ಮೈಕ್ರಾನ್‌ ಗೋಲ್ಡ್ ಪ್ಲೇಟಿಂಗ್‌ ತಂತ್ರಜ್ಞಾನದಲ್ಲಿ ಈ ಹೊತ್ತಗೆಯನ್ನು ನಿರ್ಮಿಸಿದ್ದು, ಐದು ತಿಂಗಳಿಂದ ಶ್ರಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.