ಉಡುಪಿ: ಕಾನೂನು ಮತ್ತು ಸುವ್ಯವಸ್ಥೆ, ಪ್ರವಾಹ ಪರಿಸ್ಥಿತಿ ಮೊದಲಾದ ತುರ್ತು ಸಂದರ್ಭಗಳಲ್ಲಿ ಮೊದಲು ನೆನಪಿಗೆ ಬರುವವರೇ ಗೃಹರಕ್ಷಕ ಸಿಬ್ಬಂದಿ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.
ನಗರದ ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಗೃಹರಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಜೊತೆ ಜೊತೆಯಾಗಿ ಕೆಲಸ ಮಾಡುವ ಗೃಹರಕ್ಷಕ ಸಿಬ್ಬಂದಿ ಕೆಲವೊಂದು ಸಂದರ್ಭಗಳಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಾರೆ. ಅವರ ಕಾರ್ಯ ಶ್ಲಾಘನೀಯ ಎಂದರು.
ಚುನಾವಣೆಗಳ ಸಂದರ್ಭಗಳಲ್ಲೂ ಪೊಲೀಸ್ ಇಲಾಖೆಯೊಂದಿಗೆ ಸೇರಿ ಕೆಲಸ ನಿರ್ವಹಿಸುವ ಮೂಲಕ ಗೃಹರಕ್ಷಕ ಸಿಬ್ಬಂದಿಯು ಜಿಲ್ಲಾಡಳಿತಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಮಾತನಾಡಿ, ಬಂದೋಬಸ್ತ್ ಸೇರಿದಂತೆ ವಿವಿಧ ಕೆಲಸಗಳಲ್ಲಿ ನಮಗೆ ಸಹಕಾರ ನೀಡುವವರೇ ಗೃಹರಕ್ಷಕರು. ಅವರಿಗೆ ಸದಾ ನಮ್ಮ ಬೆಂಬಲವಿದೆ ಎಂದರು.
ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ರೋಶನ್ ಕುಮಾರ್ ಶೆಟ್ಟಿ ಮಾತನಾಡಿ, ಉಡುಪಿ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗೃಹರಕ್ಷಕರ ಕೊರತೆ ಇದೆ. ಜಿಲ್ಲೆಯಲ್ಲಿ ಗೃಹರಕ್ಷಕರ 500 ಹುದ್ದೆಗಳು ಭರ್ತಿಯಾಗದ ಕಾರಣ ಈಚೆಗೆ ಹುದ್ದೆಗಳ ಸಂಖ್ಯೆಯನ್ನು 400ಕ್ಕೆ ಇಳಿಸಲಾಗಿದೆ ಎಂದು ಹೇಳಿದರು.
ಮಲ್ಪೆ ಬೀಚ್‌ನಲ್ಲಿ ಕಾರ್ಯ ನಿರ್ವಹಿಸಲು ಗೃಹರಕ್ಷಕ ದಳದ ಸಿಬ್ಬಂದಿಗೆ ಜಿಲ್ಲಾಧಿಕಾರಿಯವರು ಅವಕಾಶ ಮಾಡಿಕೊಟ್ಟಿದ್ದಾರೆ. ಬೀಚ್‌ಗಳಲ್ಲಿ ಕಾರ್ಯ ನಿರ್ವಹಿಸುವ ನಮ್ಮ ಸಿಬ್ಬಂದಿಗೆ ಈಜು ತರಬೇತಿಯನ್ನೂ ನೀಡಲಾಗುತ್ತಿದೆ. ಶೀಘ್ರ 40ರಿಂದ 45ರಷ್ಟು ಗೃಹರಕ್ಷಕ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.
ಗೃಹರಕ್ಷಕ ಸಿಬ್ಬಂದಿಗೆ ಮಣಿಪಾಲದ ಆರೋಗ್ಯ ಕಾರ್ಡ್ ನೀಡುವಂತೆ ಮನವಿ ಮಾಡಿದ್ದೇವೆ. ಅದಕ್ಕೆ ಮಣಿಪಾಲದ ಕೆಎಂಸಿಯವರು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಧಕ ಗೃಹರಕ್ಷಕರಾದ ಶಿವಪ್ರಸಾದ್, ವಿಜಯ ಕುಮಾರ್, ಪುರ್ಣಿಮಾ, ವಿಲ್ಮಾ ಜ್ಯೋತಿ ರೋಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು.
ಸೆಕೆಂಡ್ ಇನ್ ಕಮಾಂಡ್ ಕೆ.ಸಿ. ರಾಜೇಶ್ ಸ್ವಾಗತಿಸಿದರು. ರತ್ನಾಕರ್ ಎಂ. ಸನ್ಮಾನಿತರ ವಿವರ ವಾಚಿಸಿದರು. ಕಾರ್ಯಕ್ರಮದಲ್ಲಿ ಗೃಹರಕ್ಷಕ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಯಂತಿ ಪ್ರಾರ್ಥಿಸಿದರು. ಸ್ಟೀವನ್ ಪ್ರಕಾಶ್ ಲೂವಿಸ್ ನಿರೂಪಿಸಿದರು. ಪ್ರಭಾಕರ ಸುವರ್ಣ ವಂದಿಸಿದರು.
ಪೊಲೀಸ್ ಇಲಾಖೆಗೆ ಅತ್ಯಂತ ನಿಕಟವಾಗಿರುವ ಗೃಹರಕ್ಷಕರನ್ನು ಪೊಲೀಸ್ ಇಲಾಖೆಯ ಅಂಗವಾಗಿಯೇ ನಾವು ನೋಡುತ್ತೇವೆಅರುಣ್ ಕೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.