
ಕಾರ್ಕಳ: ತಾಲ್ಲೂಕು, ಪುರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳು ಶಿಥಿಲಗೊಂಡಿದ್ದು ಅವುಗಳನ್ನು ಶೀಘ್ರ ದುರಸ್ತಿಗೊಳಿಸುವಂತೆ ಪುರಸಭೆ ಆಡಳಿತಕ್ಕೆ ತಾಲ್ಲೂಕು ಆಟೊ ಚಾಲಕರು– ಮಾಲೀಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಗರದಲ್ಲಿ 350 ರಿಕ್ಷಾಗಳ ಚಾಲಕರು, ಮಾಲೀಕರು ಕಾನೂನುಬದ್ಧವಾಗಿ ಬಾಡಿಗೆ ಕೆಲಸ ಮಾಡುತ್ತಿದ್ದಾರೆ. ಪುರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳು ಶಿಥಿಲಗೊಂಡಿದ್ದು, ಪ್ರಯಾಣ ದುಸ್ತರವಾಗಿದೆ. ಈ ಕುರಿತು ಸಂಘವು ಪುರಸಭೆ ಮುಖ್ಯಾಧಿಕಾರಿ, ಆಡಳಿತ ಮಂಡಳಿಗೆ ದುರಸ್ತಿ ಮಾಡುವಂತೆ ಮನವಿ ನೀಡಿತ್ತು. ಅಧಿಕಾರಿಗಳು ದುರಸ್ತಿ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ತಿಂಗಳು ಕಳೆದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ ಎಂದು ಆರೋಪಸಿದರು.
ಆನಂತಶಯನದಿಂದ ತೆಳ್ಳಾರು, ಗುಡ್ಡೆಯಂಗಡಿ ರಸ್ತೆ, ಕಾರ್ಕಳ ನಗರದ ಹೆಚ್ಚಿನ ಕಡೆ ರಸ್ತೆಗಳು ಹೊಂಡ– ಗುಂಡಿಗಳಿಂದ ತುಂಬಿವೆ. ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು, ನಿರಂತರ ಸಂಚರಿಸುವ ದ್ವಿಚಕ್ರ ವಾಹನ, ಆಟೊರಿಕ್ಷಾ ಚಾಲಕರು ಮಾಲೀಕರು ಎಂಟು ತಿಂಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಪುರಸಭೆಯವರು ನಿರ್ಲಕ್ಷಿಸಿರುವುದರಿಂದ ಮತ್ತೆ ಮನವಿ ಸಲ್ಲಿಸಬೇಕಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ವಿಶ್ವನಾಥ ಭಂಡಾರಿ, ಪ್ರಧಾನ ಕಾರ್ಯದರ್ಶಿ ಅಣ್ಣಿ ಮಡಿವಾಳ, ಕಾರ್ಯದರ್ಶಿ ಹರೀಶ್ ದೇವಾಡಿಗ, ಕೋಶಾಧಿಕಾರಿ ಅರುಣ್ ಕಿಣಿ, ಸಂಘಟನಾ ಕಾರ್ಯದರ್ಶಿ ಸಂತೋಷ್ ರಾವ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.