
ಕಾರ್ಕಳ: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದ ಹಿತರಕ್ಷಣಾ, ಕುಂದುಕೊರತೆ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದು, ಜನರು ಸಭೆ ತೊರೆದು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ಪ್ರದೀಪ್ ಆರ್. ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗಿತ್ತು. ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಪುರಸಭಾ ಮುಖ್ಯಾಧಿಕಾರಿ ಅನುಪಸ್ಥಿತಿ ಕುರಿತು ನೆರೆದವರು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಸಮಸ್ಯೆಗೆ ಮೊದಲು ಅಧಿಕಾರಿಗಳಲ್ಲಿರುವ ಸಮಸ್ಯೆ ಪರಿಹರಿಸಿಕೊಳ್ಳಲಿ. ನಂತರ ನಮ್ಮನ್ನು ಸಭೆಗೆ ಕರೆಸಿಕೊಳ್ಳಲಿ ಎಂದು ತರಾಟೆಗೆಳೆದರು. ಅಧಿಕಾರಿಗಳಿಗೆ ನಮ್ಮ ಸಮುದಾಯದ ಬಗ್ಗೆ ಅಸಡ್ಡೆ ಏಕೆ ಎಂದು ಪ್ರಶ್ನಿಸಿ, ಹೆಚ್ಚಿನ ಅಧಿಕಾರಿಗಳು ಸಭೆಗೆ ಗೈರಾಗಿದ್ದರಿಂದ ಸಭೆ ತೊರೆಯಲಾರಂಭಿಸಿದರು.
ಸಭೆಯಲ್ಲಿ 57 ಅಹವಾಲುಗಳು ಬಂದಿದ್ದವು. ಮತ್ತಾವು ಸೇತುವೆ, ಈದು ಗ್ರಾಮದಲ್ಲಿ ಜನರ ಜಾಗದ ಸಮಸ್ಯೆ, ನೂರಾಲ್‌ಬೆಟ್ಟಿನಲ್ಲಿ ಮೂಲಸೌಕರ್ಯಗಳ ಕೊರತೆ, ಶಾಲೆಗಳಲ್ಲಿ ಅಕ್ಷರ ದಾಸೋಹ ಸಮಸ್ಯೆ, ಗಣಿ ಇಲಾಖೆ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಜನರು ಭಾಗಿಯಾಗಿದ್ದರು. ಇಲಾಖೆಗಳ ಅಧಿಕಾರಿಗಳು ಇಲ್ಲದ ಕುರಿತು ಆಕ್ರೋಶಗೊಂಡು ಜನರು ಸಭೆ ಬಹಿಷ್ಕರಿಸಿದ ಮಾಹಿತಿ ತಿಳಿದ ಅಧಿಕಾರಿಗಳು ಒಬ್ಬೊಬ್ಬರಾಗಿ ಸಭೆಗೆ ಬಂದರು.
ಬಳಿಕ ನಡೆದ ಸಭೆಯಲ್ಲಿ ತಹಶೀಲ್ದಾರ್ ಪ್ರದೀಪ್ ಮಾತನಾಡಿ, ಉಪಸ್ಥಿತರಿರಬೇಕಿದ್ದ ಅಧಿಕಾರಿಗಳ ಪರವಾಗಿ ಬೇರೆಯವರು ಹಾಜರಾಗಿದ್ದರೋ ಆ ಇಲಾಖೆಯನ್ನು ಗೈರು ಎಂದು ಪರಿಗಣಿಸಲಾಗುವುದು. ಮತ್ತೊಮ್ಮೆ ಎಲ್ಲಾ ಇಲಾಖೆಗಳಿಗೆ ನೋಟಿಸ್ ಕಳುಹಿಸಿ ಮುಂದಿನ ಸಭೆಯ ದಿನ ನಿಗದಿಗೊಳಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.