
ಹೆಬ್ರಿ: ಪೋಷಕರು ಮಕ್ಕಳನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಓದಿಸುವ ಮನಸ್ಸು ಮಾಡಿದರೆ ಸರ್ಕಾರಿ ಶಾಲೆಗಳು ಮತ್ತು ಕನ್ನಡ ಮಾಧ್ಯಮ ಶಾಲೆಗಳು ಉಳಿದು ಬೆಳೆಯಲು ಸಾಧ್ಯ. ಅಂತಹ ಮಹಾನ್ ಕಾರ್ಯವನ್ನು ಪೋಪಕರೇ ಮಾಡಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲ್ಲೂಕು ಘಟಕ ಶೇಡಿಮನೆ ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯ ಸಮ್ಮೇಳನ ಸರ್ಕಾರಿ ಶಾಲೆಗಳಲ್ಲಿ ನಡೆಸಿದರೆ ಮಕ್ಕಳು ಭಾಗವಹಿಸಿ ಕನ್ನಡದ ಬಗ್ಗೆ ತಿಳಿದುಕೊಳ್ಳಲು ಸಾಧ್ಯ. ಈ ಬಗ್ಗೆ ಪರಿಷತ್ತು ಚಿಂತನೆ ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕವಾಗದೆ ವರ್ಷಗಳು ಕಳೆದಿವೆ. ಶೀಘ್ರ ಶಿಕ್ಷಕರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಶೇಡಿಮನೆ ಅರಸಮ್ಮಕಾನು ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕುದ್ರುಬೀಡು ಮೋಹನದಾಸ ಹೆಗ್ಡೆ ಪುಸ್ತಕ ಮಳಿಗೆ ಉದ್ಘಾಟಿಸಿದರು. ಪಿ.ಜಯಲಕ್ಷ್ಮೀ ಅಭಯ ಕುಮಾರ್ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿ ಸಲ್ಲಿಸಿದರು. ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಮುಖ್ಯಸ್ಥ ಶೇಡಿಮನೆ ಡಾ.ವಿಕ್ರಮ್ ಶೆಟ್ಟಿ ಪುಸ್ತಕ ಬಿಡುಗಡೆಗೊಳಿಸಿದರು.
ಅರಸಮ್ಮಕಾನು ಕ್ಷೇತ್ರದ ಅರ್ಚಕ ನಾಗರಾಜ ಬಾಯರಿ, ಅಮಾಸೆಬೈಲು ಸಬ್ ಇನ್‌ಸ್ಪೆಕ್ಟರ್ ಅಶೋಕ್, ಉದ್ಯಮಿ ಹೆಬ್ರಿ ಯೋಗೀಶ್ ಭಟ್, ಹೆಬ್ರಿ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಶೆಟ್ಟಿ, ಮಡಾಮಕ್ಕಿ ಅನಂತ ತಂತ್ರಿ, ಕಾರ್ಕಳ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ, ಬೆಳ್ವೆ ಸಹಕಾರಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ, ಉದ್ಯಮಿ ಮಡಾಮಕ್ಕಿ ಶಶಿಧರ ಶೆಟ್ಟಿ, ಧರ್ಮಸ್ಥಳ ಯೋಜನಾಧಿಕಾರಿ ಲೀಲಾವತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹೆಬ್ರಿಯ ವಿದ್ಯಾಧರ ಹೆಗ್ಡೆ, ಮುನಿಯಾಲಿನ ಸುಧಾಕರ ಕೆ.ಜಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ಮನೋಹರ್ ಪಿ, ರಜನಿ ಗೋಪಾಲ ಶೆಟ್ಟಿ ಶೇಡಿಮನೆ, ಉದ್ಯಮಿ ಗಣೇಶ ಹಾಂಡ ಶಿವಪುರ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಸುಧಾಕರ ಶೆಟ್ಟಿ ಅರಸಮ್ಮಕಾನು, ಕಾರ್ಯಾಧ್ಯಕ್ಷ ಶಂಕರ ಪೂಜಾರಿ, ಸಂಚಾಲಕ ರಾಧಾಕೃಷ್ಣ ಕ್ರಮಧಾರಿ ಭಾಗವಹಿಸಿದ್ದರು.
ಮುದ್ದೂರು ಶ್ರೀನಿವಾಸ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾಕರ ಶೆಟ್ಟಿ ಅರಸಮ್ಮಕಾನು ಸ್ವಾಗತಿಸಿದರು. ಶಂಕರ ಪೂಜಾರಿ ವಂದಿಸಿದರು. ಶಶಿಧರ ಶೆಟ್ಟಿ, ಗಣೇಶ್, ನವೀನ ಶೆಟ್ಟಿ ಮಡಾಮಕ್ಕಿ ನಿರೂಪಿಸಿದರು. ಅರಸಮ್ಮಕಾನು ಪೇಟೆಯಿಂದ ಆರಂಭಗೊಂಡ ಅಧ್ಯಕ್ಷ ಮತ್ತು ಭುವನೇಶ್ವರಿಯ ಮೆರವಣಿಗೆಯನ್ನು ಕಮಲಶಿಲೆ ಕ್ಷೇತ್ರದ ಅನುವಂಶಿಕ ಆಡಳಿತ ಮೋಕ್ತೇಸರ ಸಚ್ಚಿದಾನಂದ ಚಾತ್ರ ಉದ್ಘಾಟಿಸಿದರು. ಮಡಾಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ ಪೂಜಾರಿ ರಾಷ್ಟ್ರಧ್ವಜಾರೋಹಣ ಮಾಡಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.
ಕುಂದಗನ್ನಡ ಭಾಷಾ ವೈಶಿಷ್ಟ್ಯಗಳ ಬಗೆಗೆ ಕವಿ ಅರುಣಾ ಹೆಬ್ರಿ ಮತ್ತು ಸುಲತಾ ಗಂಗಾಧರ ಹೆಗ್ಡೆ ಮುದ್ರಾಡಿ, ಕುಂದಗನ್ನಡ ಗಾದೆಗಳ ಬಗ್ಗೆ ಡಾ.ಮಾಲತಿ ಜಿ.ಪೈ, ನವೀನ್ ಶೆಟ್ಟಿ ಮಡಾಮಕ್ಕಿ, ಕುಂದಗನ್ನಡ ಆಚರಣೆಗಳ ಬಗ್ಗೆ ಶಿಕ್ಷಕರಾದ ರಾಜೀವ ಪೂಜಾರಿ ಶೇಡಿಮನೆ ವಿಷಯ ಮಂಡಿಸಿದರು. ವಾಸು ಕೆ ಸೀತಾನದಿ ಸಮನ್ವಯಕಾರರಾಗಿದ್ದರು.
ಅರುಣಾ ಹೆಬ್ರಿ ಅವರ ಅರುಣೋದಯ ಕಾಲದಲ್ಲಿ, ಸಿಂಚನಾ ಎಸ್ ಶೆಟ್ಟಿಯವರ ಹೃದಯ ಸಿಂಚನಾ ಕವನ ಸಂಕಲನ ಮತ್ತು ಮಂಜುನಾಥ ಕೆ ಶಿವಪುರ ಅವರ ಒಲುಮೆ ಗೀತಿಕಾ ಭಾವಗೀತೆ ಸಂಕಲನ ಬಿಡುಗಡೆ ಮಾಡಲಾಯಿತು. ಉಡುಪಿ ಡಯಟ್ ಪ್ರಾಂಶುಪಾಲ ಅಶೋಕ್ ಕಾಮತ್ ಉಪನ್ಯಾಸ ನೀಡಿದರು. ಶಾಸನ ಮತ್ತು ಜನಪದದಲ್ಲಿ ಹೆಬ್ರಿ ತಾಲ್ಲೂಕು ಇತಿಹಾಸ ಕುರಿತು ಮಹೇಶ ಶೆಟ್ಟಿ, ಹೆಬ್ರಿ ತಾಲ್ಲೂಕಿನ ಶಾಸನಗಳು, ಜನಪದದಲ್ಲಿ ಹೆಬ್ರಿ ತಾಲ್ಲೂಕಿನ ಊರುಗಳ ಬಗ್ಗೆ ಶ್ರೀ ಮುದ್ರಾಡಿ ವಿಚಾರ ಮಂಡಿಸಿದರು. ಬಿ ಜಗದೀಶ ಶೆಟ್ಟಿ ಸಮನ್ವಯಕಾರರಾಗಿದ್ದರು.
ಕನ್ನಡ ಮಾಧ್ಯಮ ಶಾಲೆಗಳಿಗೆ ಅನುಮತಿ ಪಡೆದು ಇಂಗ್ಲಿಷ್‌ನಲ್ಲಿ ಭೋದಿಸಲಾಗುತ್ತಿದೆ. ಇದರಿಂದಲೂ ಕನ್ನಡ ಮಾಧ್ಯಮಕ್ಕೆ ಧಕ್ಕೆಯಾಗುತ್ತಿದೆ. ಸರ್ಕಾರ ಇದನ್ನು ತಡೆದರೆ ಕನ್ನಡ ಶಾಲೆಗಳು ಉಳಿಯಲು ಸಾಧ್ಯ.ಗೋಪಾಲ ಶೆಟ್ಟಿ ಶೇಡಿಮನೆ ಸಮ್ಮೇಳನದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.