
ಉಡುಪಿ: ಜಿಲ್ಲೆಯ ಕುಂದಾಪುರದ ಉಳ್ತೂರು ನಿವಾಸಿ, ಕೊರಗ ಸಮುದಾಯದ ಡಾ.ಕೆ.ಸ್ನೇಹಾ ಅವರು ನವದೆಹಲಿಯ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ (ಯುಸಿಎಂಎಸ್) ಡಾಕ್ಟರ್ ಆಫ್ ಮೆಡಿಸಿನ್ (ಎಂ.ಡಿ) ಪದವಿ ಪಡೆದಿದ್ದಾರೆ. ಈ ಸಾಧನೆ ಮಾಡಿದ ಸಮುದಾಯದ ಮೊದಲಿಗರಾಗಿದ್ದಾರೆ.
ಸ್ನೇಹಾ ಅವರ ತಂದೆ ಗಣೇಶ ಅವರು ಸಾಮಾಜಿಕ ಕಾರ್ಯಕರ್ತರಾಗಿದ್ದು, ತಾಯಿ ಜಯಶ್ರೀ ಅವರು ಅಂಕೋಲಾದಲ್ಲಿ ಶಿಕ್ಷಕಿಯಾಗಿದ್ದಾರೆ. ಸಹೋದರಿ ಸಾಕ್ಷಿ ಅವರು ಗುಜರಾತ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್‌ನಲ್ಲಿ (ಎನ್‌ಎಸ್‌ಡಿ) ಶಿಕ್ಷಣ ಪಡೆಯುತ್ತಿದ್ದಾರೆ.
ಸ್ನೇಹಾ ಅವರು ಅಂಕೋಲಾ ಮತ್ತು ಕುಂದಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಮೂಡುಬಿದಿರೆಯ ಅಳ್ವಾಸ್ ಕಾಲೇಜಿನಲ್ಲಿ ಪಿಯು ಪೂರ್ಣಗೊಳಿಸಿದ್ದರು. ನಂತರ ಮಂಗಳೂರಿನ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದರು.
ವೈದ್ಯಕೀಯ ಪದವಿ ಶಿಕ್ಷಣದ ಬಳಿಕ ಅವರು ಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 18 ತಿಂಗಳು ಕಾರ್ಯನಿರ್ವಹಿಸಿದ್ದರು. ‘ಸಮಾಜಕ್ಕಾಗಿ ಸೇವೆ ಸಲ್ಲಿಸಲು ಬಯಸಿದ್ದೇನೆ’ ಎಂದು ಸ್ನೇಹಾ ತಿಳಿಸಿದ್ದಾರೆ.
‘ಮಗಳಿಂದ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂಬುದು ನಮಗೆ ಖುಷಿಯ ವಿಚಾರ’ ಎಂದು ಸ್ನೇಹಾ ಅವರ ತಂದೆ ಗಣೇಶ್ ತಿಳಿಸಿದರು.