
ಕೊರಗ ಸಮುದಾಯದವರು 20ನೇ ದಿನವಾದ ಶನಿವಾರವೂ ದರಣಿ ಮುಂದುವರಿಸಿದರು
ಉಡುಪಿ: ಸರ್ಕಾರಿ ಉದ್ಯೋಗದಲ್ಲಿ ನೇರ ನೇಮಕಾತಿಗಾಗಿ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ–ಕೇರಳ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಶನಿವಾರ 20ನೇ ದಿನಕ್ಕೆ ಕಾಲಿರಿಸಿದೆ.
ಧರಣಿ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ‘ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪಿಗೆ (ಪಿ.ವಿ.ಜಿ.ಟಿ) ಸೇರಿರುವ ನಮಗೆ ಉದ್ಯೋಗದಲ್ಲಿ ನೇರ ನೇಮಕಾತಿ ನೀಡಲು ಕಾನೂನಾತ್ಮಕವಾಗಿ ಸಾಧ್ಯವಿದೆ ಎಂದು ಕಳೆದ ವರ್ಷ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದರು. ಅನಂತರ ನಾವು ನೇರ ನೇಮಕಾತಿಗಾಗಿ ಧರಣಿ ನಡೆಸಿದ್ದೆವು’ ಎಂದು ತಿಳಿಸಿದರು.
‘ಬಲಾಢ್ಯ ಸಮುದಾಯದವರೊಂದಿಗೆ ಸ್ಪರ್ಧಿಸಿ ಸರ್ಕಾರಿ ನೌಕರಿ ಪಡೆಯಲು ನಮ್ಮ ಸಮುದಾಯದ ಯುವಜನರಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ನಾವು ನೇರ ನೇಮಕಾತಿಗೆ ಆಗ್ರಹಿಸುತ್ತಿದ್ದೇವೆ. ಕಳೆದ ಬಾರಿ ಧರಣಿ ನಡೆಸಿದ ಬಳಿಕ ರಾಜ್ಯ ಸರ್ಕಾರವು 13 ಬುಡಕಟ್ಟು ಸಮುದಾಯದವರಿಗೆ ಉದ್ಯೋಗದಲ್ಲಿ ನೇರ ನೇಮಕಾತಿ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಿತ್ತು. ಇದರಿಂದ ಮತ್ತೆ ನಾವು ಉದ್ಯೋಗದಿಂದ ವಂಚಿತರಾಗಿದ್ದೇವೆ’ ಎಂದರು.
‘13 ಬುಡಕಟ್ಟುಗಳು ಇರುವುದರಿಂದ ಅವರೊಂದಿಗೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಪಿ.ವಿ.ಜಿ.ಟಿ. ಸಮುದಾಯವೆಂದು ವಿಶೇಷವಾಗಿ ಪರಿಗಣಿಸಿ ನಮ್ಮ ಯುವಜನರಿಗೆ ನೇರ ನೇಮಕಾತಿ ಮಾಡಬೇಕು’ ಎಂದು ಆಗ್ರಹಿಸಿದರು.
‘ಕೊರಗ ಸಮುದಾಯದವರಿಗೆ ಉದ್ಯೋಗ ನೀಡಬೇಕೆಂಬ ಇಚ್ಛಾಶಕ್ತಿ ಜಿಲ್ಲಾಡಳಿತಕ್ಕಾಗಲಿ, ಜನಪ್ರತಿನಿಧಿಗಳಿಗಾಗಿ ಇಲ್ಲ. 20 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದರು.
‘ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಪ್ರತಿಭಟನೆ ಆರಂಭಿಸಿದರೂ ನಮ್ಮ ಸಮಸ್ಯೆಗಳ ಬಗ್ಗೆ ಯಾವ ಜನಪ್ರತಿನಿಧಿಗಳೂ ಧ್ವನಿ ಎತ್ತಿಲ್ಲ’ ಎಂದೂ ಹೇಳಿದರು.
‘ಪೌರ ಕಾರ್ಮಿಕ ಕೆಲಸ ಬಿಟ್ಟು ಬೇರೆ ಯಾವುದೇ ಹುದ್ದೆಗೆ ಕೊರಗ ಸಮುದಾಯದವರನ್ನು ನೇಮಕ ಮಾಡುವುದಿಲ್ಲ. ಇನ್ನೂ ಹಲವರಲ್ಲಿ ನಮ್ಮ ಬಗ್ಗೆ ಅಸ್ಪೃಶ್ಯತೆಯ ಮನೋಭಾವವಿದೆ’ ಎಂದು ಧರಣಿನಿರತರು ಆರೋಪಿಸಿದರು.
‘ಸ್ವ ಉದ್ಯೋಗ ಮಾಡೋಣವೆಂದರೆ ಯಾರೂ ಸಹಕರಿಸುವುದಿಲ್ಲ. ನಮ್ಮವರು ಹೋಟೆಲ್ ಹಾಕಿದರೆ ಗ್ರಾಹಕರೇ ಬರುವುದಿಲ್ಲ. ಇಸ್ತ್ರಿ ಅಂಗಡಿ ಪ್ರಾರಂಭಿಸಿದರೆ ಬಟ್ಟೆ ಕೊಡುವವರೇ ಇಲ್ಲ’ ಎಂದೂ ದೂರಿದರು.
ಧರಣಿಯಲ್ಲಿ ಪ್ರಮುಖರಾದ ಕೆ. ಪುತ್ರನ್, ದಿನಕರ್ ಕೆಂಜೂರು, ಕುಮಾರ್ ದಾಸ್ ಹಾಲಾಡಿ, ಸಂಜೀವ, ಶೇಖರ, ದಿವ್ಯಾ, ದೀಪಿಕಾ, ದೀಪಾ, ಪ್ರವೀಣ್ ಪಾಲ್ಗೊಂಡಿದ್ದರು.
ವಿಧಾನಸಭಾ ಅಧ್ಯಕ್ಷರು ಭರವಸೆ ನೀಡಿದ್ದ ಕಾರಣ ಕಳೆದ ಬಾರಿ ಧರಣಿಯನ್ನು ಕೈಬಿಟ್ಟಿದ್ದೆವು. ಈ ಸಲ ಬೇಡಿಕೆ ಈಡೇರುವವರೆಗೂ ಅಹೋರಾತ್ರಿ ಧರಣಿಯನ್ನು ಮುಂದುವರಿಸುತ್ತೇವೆಸುಶೀಲಾ ನಾಡ ಒಕ್ಕೂಟದ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.