ADVERTISEMENT

ಮಲ್ಪೆ ಸಮುದ್ರದಲ್ಲಿ ಕನ್ನಡದ ಕಂಪು: 4000ಕ್ಕೂ ಹೆಚ್ಚು ಮಂದಿಯಿಂದ ಗಾಯನ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 12:50 IST
Last Updated 28 ಅಕ್ಟೋಬರ್ 2022, 12:50 IST
ಮಲ್ಪೆಯ ಸಮುದ್ರದ ಮಧ್ಯೆ ಶುಕ್ರವಾರ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು.
ಮಲ್ಪೆಯ ಸಮುದ್ರದ ಮಧ್ಯೆ ಶುಕ್ರವಾರ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು.   

ಉಡುಪಿ: ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಲ್ಪೆಯ ಸಮುದ್ರದ ಮಧ್ಯೆ ಕನ್ನಡದ ಕಹಳೆ ಮೊಳಗಿತು. 130ಕ್ಕೂ ಹೆಚ್ಚು ಬೋಟ್‌ಗಳಲ್ಲಿ 4000ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಏಕಕಾಲದಲ್ಲಿ, ಏಕ ಕಂಠದಲ್ಲಿ ಶುಶ್ರಾವ್ಯವಾಗಿ ಕನ್ನಡದ ಗೀತೆಗಳನ್ನು ಹಾಡಿ ಸಂಭ್ರಮಿಸಿದರು. ಸಮುದ್ರದ ಅಲೆಗಳ ಸದ್ದನ್ನೂ ಮೀರಿಸುವಂತೆ ಕನ್ನಡದ ಧ್ವನಿ ಮಾರ್ಧನಿಸಿತು.

67ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ, ವಿಭಿನ್ನ ಹಾಗೂ ವಿಶಿಷ್ಟವಾಗಿ ಆಚರಿಸಲು ಜಿಲ್ಲಾಡಳಿತ, ದಕ್ಷಿಣ ಕನ್ನಡ, ಉಡುಪಿ ಮೀನುಗಾರಿಕಾ ಫೆಡರೇಷನ್‌ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಒಟ್ಟಾಗಿ ಮಲ್ಪೆ ಸಮುದ್ರದ ಮಧ್ಯೆ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮ ಆಯೋಜಿಸಿದ್ದವು.

ಸಾಮಾನ್ಯವಾಗಿ ಧರ್ಮ, ದೇವರು, ರಾಷ್ಟ್ರಧ್ವಜಗಳು ರಾರಾಜಿಸುತ್ತಿದ್ದ ಬೋಟ್‌ಗಳಲ್ಲಿ ಕನ್ನಡದ ಧ್ವಜಗಳು ಕಂಗೊಳಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಕನ್ನಡದ ಶಾಲು ಧರಿಸಿ ಕನ್ನಡ ಪ್ರೇಮ ಮೆರೆದರು.

ADVERTISEMENT

ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಮೀನುಗಾರರು, ಬಂದರಿನ ಕಾರ್ಮಿಕರು, ಗಾಯಕರು, ಸಮುದಾಯಗಳ ಮುಖಂಡರು, ಸರ್ಕಾರಿ ಅಧಿಕಾರಿಗಳು, ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕನ್ನಡದ ಬಾವುಗಳಿಂದ ಅಲಂಕೃತವಾಗಿದ್ದ ಬೋಟ್‌ಗಳಲ್ಲಿ ಎಲ್ಲರೂ ಒಟ್ಟಾಗಿ ಕನ್ನಡದ ಗೀತೆಗಳನ್ನು ಹಾಡಿದರು. ನಾಡಗೀತೆ ಜಯ ಭಾರತ ಜನನಿಯ ತನುಜಾತೆಯಿಂದ ಆರಂಭವಾದ ಕಾರ್ಯಕ್ರಮ ಉಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾ ಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಯೊಂದಿಗೆ ಮುಕ್ತಾಯವಾಯಿತು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಉಡುಪಿ ಮತ್ತು ದಕ್ಷಿಣ ಕನ್ನಡ ಮೀನು ಮಾರಾಟ ಫೆಡರೇಷನ್ ಆಧ್ಯಕ್ಷ ಯಶ್ ಪಾಲ್ ಸುವರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಮೀನುಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಕನ್ನಡದ ಹಾಡಿಗೆ ಧನಿಯಾಗಿ, ಹೆಜ್ಜೆ ಹಾಕಿ ಸಂಭ್ರಮಿಸಿದರು.

ಕಾರ್ಯಕ್ರಮದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಲ್ಲೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಸಮುದ್ರದ ಮಧ್ಯೆ ಬೋಟ್‌ಗಳಲ್ಲಿ ನಿಂತು ಕನ್ನಡದ ಗೀತೆಗಳನ್ನು ಹಾಡಿದ್ದು ಅವಿಸ್ಮರಣೀಯ ಎಂದರು.

ಸಮುದ್ರದಲ್ಲಿ ಕಾರ್ಯಕ್ರಮ ಆಯೋಜಿಸಲು ಮೀನುಗಾರರ ಸಂಘ, ಫೆಡರೇಷನ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ನೀಡಿದ ಸಹಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಮೀನುಗಾರರ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮಾತನಾಡಿ, ‘ಕೋಟಿ ಕಂಠ ಗಾಯನ ಕಾರ್ಯಕ್ರಮವು ಭೂಮಿ, ಆಕಾಶ ಹಾಗೂ ಸಮುದ್ರದ ಮಧ್ಯೆ ನಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನೂರಾರು ಮೀನುಗಾರರು ಮೀನುಗಾರಿಕೆಗೆ ತೆರಳದೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕನ್ನಡ ಪ್ರೇಮ ಪ್ರದರ್ಶಿಸಿದ್ದಾರೆ ಎಂದರು.

ನಟಿ ಹಾಗೂ ಭರತನಾಟ್ಯ ಕಲಾವಿದೆ ಮಾನಸಿ ಸುಧೀರ್ ಮಾತನಾಡಿ, ಕನ್ನಡದ ಅಸ್ಮಿತೆಯನ್ನು ಸಾರುವ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಖುಷಿ ಕೊಟ್ಟಿದೆ. ಕನ್ನಡ ಭಾಷೆ ಉಳಿಯಬೇಕಾದರೆ ಹೆಚ್ಚೆಚ್ಚು ಬಳಕೆಯಾಗಬೇಕು. ಯುವಜನತೆಗೆ ಕನ್ನಡದ ಮೇಲಿನ ಅಭಿಮಾನ ಮೂಡಿಸುವಂತಹ ಕೋಟಿ ಕಂಠ ಗಾಯನದಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.