
ಕೋಟ (ಬ್ರಹ್ಮಾವರ): ಅಶಕ್ತರು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡುತ್ತ, ಗ್ರಾಮೀಣ ಭಾಗದ ಮಹಿಳೆಯನ್ನು ಮುಂಚೂಣಿಗೆ ತಂದು, ನಮ್ಮ ಸಂಸ್ಕೃತಿಯನ್ನು ಪ್ರತಿ ಮನೆಯಲ್ಲಿ ಜಾಗೃತಗೊಳಿಸುವ ಸ್ನೇಹಕೂಟದ ಕಾರ್ಯ ಶ್ಲಾಘನೀಯ ಎಂದು ಮಣೂರು ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ ಸಿ ಕುಂದರ್ ಹೇಳಿದರು.
ಕೋಟದ ಮಣೂರು ರಾಮಪ್ರಸಾದ ಶಾಲಾ ಆವರಣದಲ್ಲಿ ಮಣೂರು ಸ್ನೇಹಕೂಟದ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಕೋಟದ ಪಂಚವರ್ಣ ಸಂಘಟನೆಯ ಸಹಯೋಗದಲ್ಲಿ ಆಯೋಜಿಸಿದ್ದ ದಶಮ ಡಿಂಡಿಮದ ‘ಊರ್ಮನಿ ಹಬ್ಬ’ ಮಣೂರು ಮಹಿಳಾ ಗ್ರಾಮೀಣ ಜಾತ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ ಎಚ್ ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ನೇಹಕೂಟದ ಪ್ರಧಾನ ಸಂಚಾಲಕಿ ಭಾರತಿ ವಿ ಮಯ್ಯ ತುಳಸಿ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು.
ಸಮಾಜ ಸೇವಕ ಶ್ರೀಕಾಂತ ಶೆಣೈ ಹೇರಂಬ ಕಲಾ ವೇದಿಕೆ ಅನಾವರಣಗೊಳಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸ್ನೇಹಕೂಟದ ಸದಸ್ಯರಿಂದ ರಚಿತವಾದ ಪುಸ್ತಕ ಬಿಡುಗಡೆಗೊಳಿಸಿದರು. ಸಾಲಿಗ್ರಾಮ ಗುರುನಸಿಂಹ ದೇವಸ್ಥಾನದ ಅಧ್ಯಕ್ಷ ಕೆ.ಎಸ್ ಕಾರಂತ್ ಮಾತನಾಡಿದರು.
ಸಾಹಿತಿ ಪೂರ್ಣಿಮಾ ಕಮಲಶಿಲೆ, ಆಧ್ಯಾತ್ಮಿಕ ಚಿಂತಕಿ ಸುನೀತಾ ಉಡುಪ, ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಹಾಗೂ ಗ್ರಾಮೀಣ ಪರಂಪರೆ, ಆಧ್ಯಾತ್ಮಿಕ ಸಂಸ್ಕಾರದ ಬಗ್ಗೆ ತಿಳಿಸಿದರು. ದಶಮಾನೋತ್ಸವದ ಪ್ರಯುಕ್ತ ಸ್ಥಳೀಯ ಹತ್ತು ಸಾಧಕರನ್ನು ಸನ್ಮಾನಿಸಲಾಯಿತು.
ಸ್ಥಳೀಯ ಮಹಿಳಾ ಮಂಡಲವನ್ನು ಗುರುತಿಸಿ ಗೌರವಿಸಲಾಯಿತು. ಹತ್ತು ವರ್ಷ ಸಂಚಾಲಕಿಯಾಗಿ ಸೇವೆ ಸಲ್ಲಿಸಿದ ಭಾರತಿ ವಿ ಮಯ್ಯ ಅವರನ್ನು ಸಂಘದ ಪದಾಧಿಕಾರಿಗಳು ಗೌರವಿಸಿದರು.
ಪ್ರತಿಭಾ ಪುರಸ್ಕಾರ, ಸಾಲಿಗ್ರಾಮದ ಹೊಸ ಬದುಕು ಆಶ್ರಮಕ್ಕೆ ಪರಿಕರ ವಿತರಿಸಲಾಯಿತು. ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಪಂಚವರ್ಣದ ನಿಕಟಪೂರ್ವ ಅಧ್ಯಕ್ಷ ಅಜಿತ ಆಚಾರ್, ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಶ್ರೀದೇವಿ ಹಂದೆ, ಸ್ನೇಹಕೂಟದ ವಿಷ್ಣುಮೂರ್ತಿ ಮಯ್ಯ ಇದ್ದರು.
ಸ್ನೇಹಕೂಟದ ಸಂಚಾಲಕಿ ಭಾರತಿ ವಿ ಮಯ್ಯ ಸ್ವಾಗತಿಸಿದರು. ಸುವರ್ಣಲತಾ ವಂದಿಸಿದರು. ಅಕ್ಷತಾ ಗಿರೀಶ್, ನಾಗರತ್ನಾ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು. ಸುಜಾತಾ ಬಾಯರಿ, ವನಿತಾ ಉಪಾಧ್ಯ, ಸ್ಮಿತಾ ರಾಣಿ ಕಾರ್ಯಕ್ರಮ ಸಿದ್ಧತೆಗೆ ಕೈ ಜೋಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.