ಉಡುಪಿ: ಕರ್ಫ್ಯೂ ಸಂದರ್ಭ ವಿದೇಶಿ ಆನ್‌ಲೈನ್ ಮಾರಾಟ ಕಂಪೆನಿಗಳಿಗೆ ಮಾತ್ರ ಸರಕು ಸೇವೆಗಳ ಮಾರಾಟಕ್ಕೆ ಅನುಮತಿ ನೀಡಿರುವುದು ಸರಿಯಲ್ಲ ಎಂದು ಅಖಿಲ ಭಾರತ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ವಿವೇಕ್ ಜಿ.ಸುವರ್ಣ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ 2ನೇ ಅಲೆ ತಡೆಗೆ ಕರ್ಫ್ಯೂ ಜಾರಿ ಮಾಡಿರುವುದಕ್ಕೆ ಆಕ್ಷೇಪವಿಲ್ಲ. ಆದರೆ, ಉದ್ಯಮಗಳನ್ನು ಸಮಾನವಾದ ದೃಷ್ಟಿಯಲ್ಲಿ ನೋಡಬೇಕು. ಬಡ ವ್ಯಾಪಾರಿಗಳಿಗೊಂದು ನಿಯಮ, ದೊಡ್ಡ ಕಂಪೆನಿಗಳಿಗೆ ಮತ್ತೊಂದು ನಿಯಮಗಳನ್ನು ಜಾರಿಗೊಳಿಸಬಾರದು ಎಂದರು.
ಆನ್‌ಲೈನ್ ಮಾರಾಟ ಕಂಪೆನಿಗಳ ಡೆಲಿವರಿ ಪ್ರತಿನಿಧಿಗಳು ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಹಾಗೂ ಮುಂಜಾಗ್ರತೆ ಕ್ರಮ ವಹಿಸದೆ ಸೋಂಕು ಹರಡುವ ಭೀತಿ ಎದುರಾಗಿದೆ. ಸರ್ಕಾರ ಆನ್‌ಲೈನ್ ಕಂಪೆನಿಗಳಿಗೆ ಮಾತ್ರ ಸರಕುಗಳನ್ನು ಸರಬರಾಜು ಮಾಡಲು ಅವಕಾಶ ಕೊಟ್ಟು, ವಿದೇಶಿ ಕಂಪೆನಿಗಳಿಗೆ ಪರೋಕ್ಷ ಬೆಂಬಲ ನೀಡುತ್ತಿರುವುದು ಸರಿಯಲ್ಲ. ಸಣ್ಣ ಮೊಬೈಲ್ ವ್ಯಾಪಾರಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಉದ್ಯಮದ ಬೇಡಿಕೆಗಳನ್ನು, ಸಮಸ್ಯೆಗಳನ್ನು ಇಮೇಲ್ ಮತ್ತು ಟ್ವೀಟ್ ಮುಖಾಂತರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ವಿದೇಶಿ ಆನ್‌ಲೈನ್ ಕಂಪೆನಿಗಳ ವ್ಯಾಪಾರವನ್ನು ರಾಜ್ಯದಲ್ಲಿ ನಿರ್ಬಂಧಿಸಿ ಸ್ಥಳೀಯ ವ್ಯಾಪಾರಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಒತ್ತಾಯಿಸಲಾಗಿದೆ ಎಂದರು.
ಅಖಿಲ ಭಾರತೀಯ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಂದೇಶ್ ಬಲ್ಲಾಳ್, ಕಾರ್ಯದರ್ಶಿ ಸುಹಾಸ್ ಕಿಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.