ADVERTISEMENT

ಉಡುಪಿ| ನಾಗರ ಪಂಚಮಿ ಸಂಭ್ರಮ: ಹಾಲೆರೆದು ಭಕ್ತಿ ಸಮರ್ಪಣೆ

ನಾಗದೇವಸ್ಥಾನ, ನಾಗಬನಗಳಲ್ಲಿ ವಿಶೇಷ ಪೂಜೆ: ಎಳನೀರು, ಹಾಲಿನ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 15:40 IST
Last Updated 13 ಆಗಸ್ಟ್ 2021, 15:40 IST
ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ ನಾಗದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.
ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ ನಾಗದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.   

ಉಡುಪಿ: ಕೋವಿಡ್ ಆತಂಕದ ಮಧ್ಯೆಯೇ ಜಿಲ್ಲೆಯಾದ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ನಾಗರ ಪಂಚಮಿಯನ್ನು ಆಚರಿಸಲಾಯಿತು. ಸುರಕ್ಷತಾ ಕ್ರಮಗಳೊಂದಿಗೆ ಕುಟುಂಬ ಸಮೇತರಾಗಿ ನಾಗನ ದೇವಸ್ಥಾನ ಹಾಗ ನಾಗಬನಗಳಿಗೆ ಬಂದ ಭಕ್ತರು ದೇವರಿಗೆ ಹಾಲು, ಎಳನೀರು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.

ಕಳೆದ ವರ್ಷ ಕೋವಿಡ್‌ ಸೋಂಕು ವ್ಯಾಪಕವಾಗಿದ್ದ ಕಾರಣ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಣೆಗೆ ಅವಕಾಶ ಇರಲಿಲ್ಲ. ಈ ವರ್ಷ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಕೆಗೆ ಸರ್ಕಾರ ಅನುಮತಿ ನೀಡಿರುವುದರಿಂದ ನಾಗಬನ ಹಾಗೂ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

ಭಕ್ತರು ದೇವರಿಗೆ ಎಳನೀರು, ಕೇದಗೆ, ಅಡಿಕೆಯ ಸಿಂಗಾರ, ಬಾಳೆಹಣ್ಣು ಹಾಗೂ ಬಗೆಬಗೆಯ ಹೂಗಳನ್ನು ಸಮರ್ಪಿಸಿದರು. ಅರ್ಚಕರು ನಾಗನಿಗೆ ಹಾಲು ಹಾಗೂ ಎಳನೀರಿನ ಅಭಿಷೇಕ ಮಾಡಿ, ಹಿಂಗಾರದ ಪ್ರಸಾದ ವಿತರಿಸಿದರು. ಹಬ್ಬಕ್ಕೆ ಮಳೆ ಅಡ್ಡಿಯಾಗಲಿಲ್ಲ.

ADVERTISEMENT

ಕೃಷ್ಣ ಮಠದಲ್ಲಿ ಸೋದೆ ವಾದಿರಾಜ ಶ್ರೀಗಳಿಂದ ಪ್ರತಿಷ್ಠಾಪನೆಯಾಗಿರುವ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ನಾಗರಪಂಚಮಿ ವಿಶೇಷ ಪೂಜೆ ನಡೆಯಿತು. ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥರು ನಾಗದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.

ಕಿದಿಯೂರು ಹೋಟೆಲ್ ಹಿಂಭಾಗದಲ್ಲಿರುವ ನಾಗನ ದೇವಸ್ಥಾನ, ಬ್ರಹ್ಮಗಿರಿ ಸಮೀಪದ ನಾಗಬನ, ಗುಂಡಿಬೈಲು ನಾಗಬನ, ದೊಡ್ಡಣಗುಡ್ಡೆಯ ಸಗ್ರಿ ನೈಸರ್ಗಿಕ ನಾಗಬನ, ತಾಂಗೋಡು, ಮಾಂಗೋಡು, ಮುಚ್ಲುಕೋಡು, ಅರಿತೋಡು ನಾಗಸನ್ನಿಧಿ, ಮಣಿಪಾಲದ ಮಂಚಿಕರೆ ನಾಗಬನ, ಇಂದ್ರಾಳಿಯ ನಾಗಬನ,ಮಣಿಪಾಲದ ಸರಳೆಬೆಟ್ಟು ಉಮಾಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು.

ಹಬ್ಬಕ್ಕೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ರಥಬೀದಿ, ಕೃಷ್ಣಮಠದ ಸುತ್ತಲಿನ ಪ್ರದೇಶದಲ್ಲಿ ಹೂ, ಹಣ್ಣು, ಕೇದಗೆ ಹೂ ಹಾಗೂ ಸಿಂಗಾರ ಖರೀದಿ ಜೋರಾಗಿತ್ತು. ಹೊರ ಜಿಲ್ಲೆಗಳಿಂದ ವ್ಯಾಪಾರಿಗಳು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.