ADVERTISEMENT

ಯುಪಿಸಿಎಲ್‌ಗೆ ₹52.02 ಕೋಟಿ ಪರಿಸರ ಹಾನಿ ಪಾವತಿಗೆ ಎನ್‌ಜಿಟಿ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 7:49 IST
Last Updated 2 ಜೂನ್ 2022, 7:49 IST

ಉಡುಪಿ: ಪಡುಬಿದ್ರಿ ಸಮೀಪದ ಯಲ್ಲೂರಿನಲ್ಲಿರುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಯುಪಿಸಿಎಲ್‌ ಕಾರ್ಖಾನೆಯಿಂದ ಸುತ್ತಮುತ್ತಲಿನ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಜನಜಾಗೃತಿ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ಪೀಠ (ದಕ್ಷಿಣ ವಲಯ) ಮಂಗಳವಾರ ತೀರ್ಪು ನೀಡಿದ್ದು, ₹ 52,02,50,000 ಪರಿಸರ ಹಾನಿ ಪರಿಹಾರ ಪಾವತಿಸುವಂತೆ ಯುಪಿಸಿಎಲ್‌ಕಂಪೆನಿಗೆಆದೇಶಿಸಿದೆ.

2005ರಿಂದಲೂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದಿತ್ತು. ಸುಧೀರ್ಘ ವಿಚಾರಣೆ ಬಳಿಕ ಎನ್‌ಜಿಟಿ ಅಂತಿಮ ತೀರ್ಪು ನೀಡಿದ್ದು ಕಂಪೆನಿಯ 10 ಕಿ.ಮೀ ವ್ಯಾಪ್ತಿಯಲ್ಲಿ ಉಂಟಾಗಿರುವ ಪರಿಸರ ಹಾನಿಗೆ ಪ್ರತಿಯಾಗಿ ನಷ್ಟ ಪರಿಹಾರ ಭರಿಸುವಂತೆ ಸೂಚನೆ ನೀಡಿದೆ.

ಜತೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆಗೆ ನಿರ್ದೇಶನ ನೀಡಿದ್ದು, ಕಾರ್ಖಾನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾಗಿರುವ ಬೆಳೆ ಹಾನಿ ಸಮೀಕ್ಷೆ ನಡೆಸಿ, ಬೆಳೆ ಕಳೆದುಕೊಂಡಿರುವ ರೈತರಿಗೆ ಕಾರ್ಖಾನೆ ನಷ್ಟ ಪರಿಹಾರ ವಿತರಿಸುವಂತೆಯೂ ಸೂಚನೆ ನೀಡಿದೆ.

ADVERTISEMENT

ಯುಪಿಸಿಎಲ್‌ನ ಘಟಕಗಳಿಂದ 2010ರಿಂದ 2020ರವರೆಗಿನ ಅವಧಿಯಲ್ಲಿ ಕಾರ್ಖಾನೆ ಸುತ್ತಮುತ್ತಲು ಜನರ ಆರೋಗ್ಯದ ಮೇಲೆ ಉಂಟಾಗಿರುವ ಗಂಭೀರ ಪರಿಣಾಮಗಳ ಕುರಿತು ಪರಿಶೀಲನೆ ನಡೆಸಿ ಈಚೆಗೆ ತಜ್ಞರ ಸಮಿತಿ ವರದಿ ಸಲ್ಲಿಸಿತ್ತು. ಕಾರ್ಖಾನೆಯ ನಿರ್ಧಿಷ್ಟ ಪ್ರದೇಶದ ವ್ಯಾಪ್ತಿಯಲ್ಲಿ ಜನರಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಳವಾಗಿರುವ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.