ADVERTISEMENT

ಓಬವ್ವ ಬದುಕು ಪ್ರೇರಣೆಯಾಗಲಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 4:56 IST
Last Updated 12 ನವೆಂಬರ್ 2025, 4:56 IST
ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು 
ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು    

ಉಡುಪಿ: ಮಾತೃಭೂಮಿಗಾಗಿ ಒನಕೆ ಹಿಡಿದು ಶತ್ರುಗಳನ್ನು ಸದೆಬಡಿದು ರಾಜ್ಯದ ರಕ್ಷಣೆ ಮಾಡಿದ್ದ ಓಬವ್ವರ ತ್ಯಾಗ, ದೇಶ ಪ್ರೇಮ, ನಿಷ್ಠೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಣಿಪಾಲದ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒನಕೆ ಓಬವ್ವ ಆತ್ಮರಕ್ಷಣೆಯ ಪ್ರತೀಕ. ಆಕೆಯ ತ್ಯಾಗ, ಬಲಿದಾನ, ಸಮರ್ಪಣೆಯನ್ನು ಸ್ಮರಿಸುವ ಸಲುವಾಗಿ ಸರ್ಕಾರವು ಜಯಂತಿ ಆಚರಿಸಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಭಾವವನ್ನು ಬಿತ್ತುತ್ತಿರುವುದು ಸಂತೋಷದ ವಿಚಾರ. ಜಾತಿ, ಮತ, ನಾನು ನನ್ನದು ಎನ್ನುವುದಕ್ಕಿಂತ ಭಾರತ ಮೊದಲು ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿ ಮೊಳೆಯಬೇಕು ಅದಕ್ಕೆ ಒನಕೆ ಓಬವ್ವ ಜಯಂತಿ ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.

ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಕುತಂತ್ರದಿಂದ ಚಿತ್ರದುರ್ಗದ ಕೋಟೆಗೆ ಒಳ ನುಸುಳಿದ ಹೈದರಾಲಿಯ ಸೈನ್ಯದ ವಿರುದ್ಧ ದಿಟ್ಟತನದಿಂದ ಹೋರಾಡಿದ ಒನಕೆ ಓಬವ್ವರ ಧೈರ್ಯ, ದೇಶ ಪ್ರೇಮ ಸದಾ ಸ್ಮರಣೀಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಎಸ್.ಕಾದ್ರೋಳ್ಳಿ, ಯುವ ಪೀಳಿಗೆಯು ಮಹನೀಯರ ಮಹತ್ವವನ್ನು ಅರಿತು ಅವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.

ಕುಂದಾಪುರದ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಒನಕೆ ಓಬವ್ವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಗರಾಭಿವೃದ್ಧಿ ಕೋಶದ ಸುಬ್ರಮಣ್ಯ ಶೆಟ್ಟಿ, ಮಣಿಪಾಲ ಹೈಸ್ಕೂಲ್ ಟ್ರಸ್ಟ್, ಮಣಿಪಾಲ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಕಾಲೇಜಿನ ಉಪ ಪ್ರಾಂಶುಪಾಲ ನಾಗೇಂದ್ರ ಪೈ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ವರ್ಷಾ ನಿರೂಪಿಸಿದರು. ಶಿಕ್ಷಕ ಸಚ್ಚಿದಾನಂದ ವಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.