ADVERTISEMENT

ಉಡುಪಿ: ಹೆದ್ದಾರಿಯಲ್ಲಿ ಮೃತ್ಯು ಕೂಪಗಳು!

ನಿತ್ಯ ಅಪಘಾತ: ಅಮಾಯಕ ಜೀವಗಳು ಬಲಿ

ಬಾಲಚಂದ್ರ ಎಚ್.
Published 19 ಜುಲೈ 2022, 19:30 IST
Last Updated 19 ಜುಲೈ 2022, 19:30 IST
ಕುಂದಾಪುರದ ಮೇಲೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಗುಂಡಿಗಳು.
ಕುಂದಾಪುರದ ಮೇಲೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಗುಂಡಿಗಳು.   

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಹೊಂಡ ಗುಂಡಿಗಳು ವಾಹನ ಸವಾರರ ಪಾಲಿಗೆ ಮೃತ್ಯು ಕೂಪಗಳಾಗಿ ಕಾಡುತ್ತಿವೆ. ಹೆದ್ದಾರಿಯಲ್ಲಿರುವ ಅಡಿಯುದ್ದದ ಗುಂಡಿಗಳು ಸರಣಿ ಅಪಘಾತಗಳಿಗೆ ಕಾರಣವಾಗಿದ್ದು, ಅಮಾಯಕ ಜೀವಗಳನ್ನು ಬಲಿ ಪಡೆದುಕೊಳ್ಳುತ್ತಿವೆ.

ಉಡುಪಿಯಿಂದ ಮಂಗಳೂರು ಹಾಗೂ ಉಡುಪಿಯಿಂದ ಕುಂದಾಪುರ–ಬೈಂದೂರು ಮಧ್ಯೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೂರಾರು ಗುಂಡಿಗಳು ನಿರ್ಮಾಣವಾಗಿದ್ದು ನಿತ್ಯ ಅಪಘಾತಗಳು ಸಂಭವಿಸುತ್ತಿವೆ.

ಉಡುಪಿಯಿಂದ ಉದ್ಯಾವರ, ಕಾಪು, ಪಡುಬಿದ್ರಿ, ಹೆಜಮಾಡಿ ಮಾರ್ಗವಾಗಿ ಮಂಗಳೂರು ತಲುಪುವವರೆಗೂ ಅಲಲ್ಲಿ ಗುಂಡಿಗಳ ದರ್ಶನವಾಗುತ್ತದೆ. ಹಾಗೆಯೇ ಉಡುಪಿಯಿಂದ ಕಟಪಾಡಿ, ಬ್ರಹ್ಮಾವರ, ಕುಂದಾಪುರ, ತಲ್ಲೂರು, ಬೈಂದೂರುವರೆಗಿನ ಹೆದ್ದಾರಿಯಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು ಸವಾರರಿಗೆ ಕಂಟಕವಾಗಿವೆ.

ADVERTISEMENT

ಕರಾವಳಿಯಾದ್ಯಂತ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಬಾರಿ ಮಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳ ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸಿದೆ. ಗುಂಡಿಗಳಲ್ಲಿ ಮಳೆಯ ನೀರು ತುಂಬಿಕೊಂಡಿರುವ ಪರಿಣಾಮ ಹೆದ್ದಾರಿಯಲ್ಲಿ ವೇಗವಾಗಿ ಸಾಗುವ ವಾಹನಗಳು ಹೊಂಡಗಳಿಗೆ ಇಳಿದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುತ್ತಿವೆ.

ಕೆಲವು ದಿನಗಳ ಹಿಂದಷ್ಟೆ ಬೈಂದೂರು ತಾಲ್ಲೂಕಿನ ಕಂಬದಕೋಣೆ ಸೇತುವೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಹೊಡೆದು ಮೃತಪಟ್ಟಿದ್ದಾರೆ.

ಕುಂದಾಪುರ ತಾಲ್ಲೂಕಿನ ಕುಂಭಾಶಿ ಸಮೀಪದ ಕೊರವಡಿಯ ಬಳಿ ಹೆದ್ದಾರಿ ಹೊಂಡಕ್ಕೆ ಇಳಿದ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆರಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಪ್ರಾಣಾಪಾಯವಾಗಿಲ್ಲ. ಸ್ವಲ್ಪ ಎಚ್ಚರ ತಪ್ಪಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.

ನಿತ್ಯವೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ನಡೆಯುತ್ತಲೇ ಇದ್ದು, ಸವಾರರು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ. ಇಷ್ಟಾದರೂ ಹೆದ್ದಾರಿ ನಿರ್ವಹಣೆಯ ಹೊಣೆ ಹೊತ್ತಿರುವ ಗುತ್ತಿಗೆ ಕಂಪೆನಿಯವರಾಗಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲೀ ಗುಂಡಿಗಳನ್ನು ಮುಚ್ಚುವ ಗೋಜಿಗೆ ಹೋಗಿಲ್ಲ ಎಂದು ವಾಹನ ಸವಾರರು ದೂರಿದ್ದಾರೆ.

ಮಳೆಗಾಲಕ್ಕೂ ಮುನ್ನ ಹೆದ್ದಾರಿಯ ನಿರ್ವಹಣೆ ಬಹಳ ಮುಖ್ಯ. ಹೆದ್ದಾರಿಯಲ್ಲಿ ಮಳೆಯ ನೀರು ನಿಲ್ಲದೆ ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡಬೇಕು. ನೀರು ಹರಿವಿಗೆ ಅಡ್ಡಿಯಾಗಿರುವ ತ್ಯಾಜ್ಯ, ಮಣ್ಣು ತೆಗೆಸಿ ಸ್ವಚ್ಛಗೊಳಿಸಬೇಕು. ಆದರೆ, ಈ ಕಾರ್ಯಗಳು ನಿಯಮಿತವಾಗಿ ನಡೆಯುತ್ತಿಲ್ಲ.

ಸಣ್ಣ ಮಳೆಗೂ ಹೆದ್ದಾರಿ ಜಲಾವೃತಗೊಳ್ಳುತ್ತಿದೆ. ರಸ್ತೆಯ ಮೇಲೆ ನಿಲ್ಲುವ ನೀರು ಹೆದ್ದಾರಿಯನ್ನು ಶಿಥಿಲಗೊಳಿಸುತ್ತಿದ್ದು, ಭಾರಿ ವಾಹನಗಳು ಸಂಚರಿಸಿದಾಗ ಬಿರುಕುಗಳು ಸೃಷ್ಟಿಯಾಗಿ ಕ್ರಮೇಣ ಗುಂಡಿಗಳಾಗಿ ಬದಲಾಗುತ್ತಿವೆ. ಹೆದ್ದಾರಿಯ ಅಲ್ಲಲ್ಲಿ ಇಕ್ಕೆಲಗಳು ಕುಸಿಯುವ ಭೀತಿಯಲ್ಲಿವೆ.

ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ನಂದಿಕೂರು ಮತ್ತು ಅಡ್ವೆ ಸೇತುವೆ ಹೊಂಡಮಯವಾಗಿ ವಾಹನ ಸವಾರರಿಗೆ ದುಸ್ವಪ್ನವಾಗಿ ಕಾಡುತ್ತಿದೆ.

ಪ್ರಸಿದ್ಧ ಪ್ರವಾಸಿ ತಾಣ ಮಲ್ಪೆಗೆ ಸಂಪರ್ಕ ಕಲ್ಪಿಸುವ 169 ಎ ಹೆದ್ದಾರಿ ತುಂಬೆಲ್ಲ ಹೊಂಡಗಳು ನಿರ್ಮಾಣವಾಗಿವೆ. ಉಡುಪಿಯಿಂದ ಮಲ್ಪೆಯವರೆಗೂ ವಾಹನ ಸವಾರರು ಗುಂಡಿಗಳನ್ನು ತಪ್ಪಿಸಿಕೊಂಡು ಸರ್ಕಲ್‌ ಮಾಡುತ್ತಲೇ ವಾಹನ ಚಲಾಯಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.