ADVERTISEMENT

ಅಂಬಿ ಸಮಾರಾಧನೆಗೆ ರಮ್ಯಾ ಬರಬಹುದು: ಸಚಿವೆ ಜಯಮಾಲಾ ಆಶಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 9:48 IST
Last Updated 1 ಡಿಸೆಂಬರ್ 2018, 9:48 IST
ಜಯಮಾಲ
ಜಯಮಾಲ   

ಉಡುಪಿ: ‘ಅಂಬರೀಷ್ ಮೃತಪಟ್ಟಾಗ ಬಾರದ ನಟಿ ರಮ್ಯಾ ವೈಕುಂಠ ಸಮಾರಾಧನೆಗೆ ಬರಬಹುದು’ ಎಂದು ಉಸ್ತುವಾರಿ ಸಚಿವೆ ಜಯಮಾಲ ತಿಳಿಸಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಆರೋಗ್ಯ ಸರಿಯಿಲ್ಲ ಎಂದು ರಮ್ಯಾ ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಕಾರಣ ಇರಲು ಸಾಧ್ಯವಿಲ್ಲ ಎಂದು ಅನಿಸುತ್ತಿದೆ. ಹೆಣ್ಣು ಮಕ್ಕಳಿಗೆ ಹಲವು ತೊಂದರೆಗಳಿರುತ್ತವೆ’ ಎಂದು ರಮ್ಯಾ ಪರ ಬ್ಯಾಟಿಂಗ್‌ ಮಾಡಿದರು.

ವಿಷ್ಣು ಸ್ಮಾರಕ ವಿಚಾರ ಕುರಿತು ಪ್ರತಿಕ್ರಿಯಿಸಿದಅವರು, ‘ಎಲ್ಲಿ ವಿಷ್ಣುವರ್ಧನ್ ಸ್ಮಾರಕ ಮಾಡಲು ಹೋದರೂ ಅಲ್ಲಿ ವಿವಾದ ಎದುರಾಗುತ್ತಿದೆ. ವಿಷ್ಣುವರ್ಧನ್ ನಿಧನರಾಗಿ 9 ವರ್ಷ ಕಳೆದರೂ ಸ್ಮಾರಕ ಆಗದಿರುವ ಬಗ್ಗೆ ನೋವಿದೆ. ಅವರು ಹುಟ್ಟಿ ಬೆಳೆದ ಹಾಗೂ ಕೊನೆಯುಸಿರೆಳೆದ ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಿಸುವಂತೆ ಭಾರತಿ ವಿಷ್ಣುವರ್ಧನ್‌ ಮನವಿ ಮಾಡಿದ್ದಾರೆ. ವಿಷ್ಣು ಆಸೆ ಅವರ ಕುಟುಂಬಕ್ಕೆ ಗೊತ್ತಿದೆ. ನಾವು ಅವರ ಮಾತಿಗೆ ಗೌರವ ಕೊಡಬೇಕಾಗಿದೆ’ ಎಂದರು.

ADVERTISEMENT

ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಸಿನಿಮಾ ರಂಗದಿಂದ ಬಂದವರು. ಸ್ಮಾರಕ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಭಾರತಿ ಅವರು ಸ್ಮಾರಕ ನಿರ್ಮಾಣ ಮಾಡಲು ಹೇಳುವ ಜಾಗದಲ್ಲಿ ತಕರಾರು ಇದೆ. ಈಚೆಗೆ ಶಾಸಕ ಮುನಿರತ್ನ, ನಿರ್ಮಾಪಕ ಮಂಜು ಸಂಧಾನ ಮಾತುಕತೆ ನಡೆಸಿದ್ದಾರೆ ಎಂದರು.

ಅಂಬರೀಷ್ ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸಿರುವ ಶ್ರೇಷ್ಠನಟ. ಅವರ ಸ್ಮಾರಕ ಖಂಡಿತವಾಗಿಯೂ ಕಂಠೀರವ ಸ್ಟುಡಿಯೋದಲ್ಲಿಯೇ ಆಗುತ್ತದೆ. ಸ್ಮಾರಕಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.