ADVERTISEMENT

‘ಪ್ರತಿಭಾ ಪಲಾಯನ ತಡೆದರೆ ದೇಶ ಅಭಿವೃದ್ಧಿ’

ಆರ್.ಎಸ್.ಎಸ್ ಉಡುಪಿ ಜಿಲ್ಲಾ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2022, 14:23 IST
Last Updated 14 ಅಕ್ಟೋಬರ್ 2022, 14:23 IST
ಮಣಿಪಾಲ ಸಮೀಪದ ಪರ್ಕಳ ಪ್ರೌಢಶಾಲೆಯಲ್ಲಿ ಆರ್.ಎಸ್.ಎಸ್ ಉಡುಪಿ ಜಿಲ್ಲಾ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭ ನಡೆಯಿತು.
ಮಣಿಪಾಲ ಸಮೀಪದ ಪರ್ಕಳ ಪ್ರೌಢಶಾಲೆಯಲ್ಲಿ ಆರ್.ಎಸ್.ಎಸ್ ಉಡುಪಿ ಜಿಲ್ಲಾ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭ ನಡೆಯಿತು.   

ಉಡುಪಿ: ವಿದೇಶಿ ಪ್ರತಿಭಾ ಪಲಾಯನ ತಡೆದರೆಮಾನವ ಅಭಿವೃದ್ಧಿ‌ ಸೂಚ್ಯಂಕ, ಜಾಗತಿಕ ಬಡತನ, ಉನ್ನತ ಶಿಕ್ಷಣ ಪಡೆವವರ ಸೂಚ್ಯಂಕದಲ್ಲಿ ಭಾರತ‌ದ ಸ್ಥಾನ ಹೆಚ್ಚಾಗಲಿದೆ ಎಂದು ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ‌ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೇಳಿದರು.

ಪರ್ಕಳ ಪ್ರೌಢಶಾಲೆಯಲ್ಲಿ ನಡೆದ ಆರ್.ಎಸ್.ಎಸ್ ಉಡುಪಿ ಜಿಲ್ಲಾ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ವೈದ್ಯಕೀಯ ವೆಚ್ಚ ಹೆಚ್ಚುತ್ತಿದ್ದು ಶೇ 80ರಷ್ಟು ವೈದ್ಯಕೀಯ ಸಲಕರಣೆಗಳು ಆಮದಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ. 2047 ರಹೊತ್ತಿಗೆ ಭಾರತದಿಂದ ವೈದ್ಯಕೀಯ ಉಪಕರಣಗಳು ರಫ್ತಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಆಶಿಸಿದರು.

ದೇಶದ ರಕ್ಷಣೆ, ಆಹಾರ‌ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾದರೂ ಶಿಕ್ಷಣ, ಆರೋಗ್ಯ ಕ್ಷೇತ್ರ ಸೇರಿದಂತೆ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬಿಯಾಗಬೇಕು ಎಂದರು.

ADVERTISEMENT

ದೇಶದಲ್ಲಿನ ಅತ್ಯುನ್ನತ ಶಿಕ್ಷಣ ಸಂಸ್ಥೆಯಾಗಿರುವ ಐಐಟಿಯಿಂದ ಹೊರಬರುವ ಪ್ರತಿಭಾನ್ವಿತರು ವಿದೇಶಗಳಿಗೆ ನೆಲೆ ಕಂಡುಕೊಂಡು ಆ ದೇಶದ ಅಭಿವೃದ್ಧಿಗೆ ದುಡಿಯುತ್ತಾರೆ. ದೇಶದ ಪ್ರತಿಭೆಗಳಿಗೆ ದೇಶದಲ್ಲಿಯೇ ಸೇವೆ ಸಲ್ಲಿಸುವಂತಹ ಅವಕಾಗಳು ಸೃಷ್ಟಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

ಆರ್‌ಎಸ್‌ಎಸ್ ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುವ ಸಂಘಟನೆಯಾಗಿದ್ದು, ದೇಶಕ್ಕೆ ಆಪತ್ತು ಬಂದಾಗ ಸೇನೆಯ ಜೊತೆಗೆ ಕೈಜೋಡಿಸಿ ನೆರವಿಗೆ ನಿಂತಿದೆ. ಸಮಸ್ಯೆಗಳು ವಿಪತ್ತುಗಳು ಎದುರಾದಾಗ ಸ್ಪಂದಿಸಿದೆ ಎಂದರು.

ಆರ್.ಎಸ್.ಎಸ್.ನ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸುರೇಶ್ ಹೆಜಮಾಡಿ ಮಾತನಾಡಿ, ಹಿಂದೂ ಸಂಸ್ಕೃತಿ ಉಳಿದು, ಬೆಳೆದರೆ ಜಗತ್ತು ಬೆಳಗುತ್ತದೆ. ಆರೆಸ್ಸೆಸ್ ಯಾರ ವಿರುದ್ಧವೂ ಇಲ್ಲ, ಸಾಮರಸ್ಯಕ್ಕಾಗಿ ಶ್ರಮಿಸುತ್ತಿದೆ.‌ ಸಂಘಟನೆಯ ವಿರುದ್ಧದ ಆರೋಪಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ವ್ಯವಸ್ಥೆಯ‌ ಪರಿವರ್ತನೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರ, ಅಂತ್ಯೋದಯವೇ ಆರ್‌ಎಸ್‌ಎಸ್‌ ಧ್ಯೇಯ ಎಂದರು

ರಾಷ್ಟ್ರ ನನ್ನದು ಎಂಬ ಭಾವನೆಯೊಂದಿಗೆ ಸಮಾಜವನ್ನು ಸಂಘಟಿಸಲು ಸ್ವಾರ್ಥ ತೊರೆದು ಸಂಸ್ಕಾರ‌ ಪ್ರಧಾನ ಶಿಕ್ಷಣ‌ ಬದುಕಿನ ಗುರಿಯಾಗಬೇಕು. ದೇಶ‌ ಪರಮ ವೈಭವ ಸ್ಥಿತಿ ತಲುಪಬೇಕು. ವ್ಯಕ್ತಿಗತ‌ವಾಗಿ ಉತ್ತಮ ವ್ಯಕ್ತಿತ್ವ, ಚಾರಿತ್ರ್ಯ ನಿರ್ಮಾಣ ಕಾರ್ಯದಲ್ಲಿ ಸಂಘಟನೆ ತೊಡಗಿಸಿಕೊಂಡಿದೆ ಎಂದರು

ಆರೆಸ್ಸೆಸ್ ಉಡುಪಿ ಜಿಲ್ಲಾ ಸಂಘ ಚಾಲಕ್ ಡಾ.ನಾರಾಯಣ ಶೆಣೈ ಇದ್ದರು. ವರ್ಗಾಧಿಕಾರಿ ಕೃಷ್ಣ ಪ್ರಸಾದ್ ಶೆಟ್ಟಿ‌ ಶಿಬಿರದ ವರದಿ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.