
ಬೈಂದೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಬೇರ್ಪಡಿಸುವಂತೆ ಆಗ್ರಹಿಸಿ 121 ದಿನಗಳಿಂದ ಬೈಂದೂರು ರೈತ ಸಂಘದ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸರಿಯಾದ ಕಾರಣ ನೀಡದೇ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.
ಬೈಂದೂರು ತಾಲ್ಲೂಕು ಆಡಳಿತ ಸೌಧದ ಎದುರು ನಡೆದ ರೈತರ ಹೋರಾಟ ಮತ್ತು ಬೃಹತ್ ಬೈಕ್ ಜಾಥಾಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬೇರೆ ಬೇರೆ ವಿಷಯಗಳಲ್ಲಿ ರಾಜಕೀಯ ಮರೆತು ಹೊಂದಾಣಿಕೆ ಮಾಡಿಕೊಳ್ಳುವ ನಾಯಕರು ಈ ವಿಷಯದಲ್ಲೂ ಒಂದಾಗಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದರು.
ಕೆ.ಆರ್.ಎಸ್. ಬೆಂಗಳೂರು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಮಾತನಾಡಿ, ನೂರಾರು ದಿವಸ ರೈತರು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಕೈಕಟ್ಟಿ ಕುಳಿತಿದೆ. ರೈತರ ವಿಚಾರದಲ್ಲಿ ಅನ್ಯಾಯವಾದರೆ ಕೆ.ಎಸ್.ಆರ್ ಪಕ್ಷದ ರಾಜ್ಯಮಟ್ಟದ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ ಎಂದರು.
ಖಂಬದಕೋಣೆ ರೈತರ ಸೇವಾ ಸಹಾಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಗ್ರಾ.ಪಂ ಮಾಜಿ ಸದಸ್ಯ ಗಣೇಶ ಪೂಜಾರಿ, ನಾಗಪ್ಪ ಮರಾಠಿ, ಲಿಮೋನ್ ಬೈಂದೂರು, ಪದ್ಮಾಕ್ಷ ಗೋಳಿಬೇರು, ಹಿರಿಯರಾದ ಹೆರಿಯಣ್ಣ ಪೂಜಾರಿ ಗೋಳಿಬೇರು, ಸುಭಾಷ್ ಗಂಗನಾಡು, ಕೇಶವ ಪೂಜಾರಿ ಅಂತಾರ್, ರೈತ ಮುಖಂಡರು, ಗ್ರಾಮೀಣ ಭಾಗದ ರೈತರು ಹಾಗೂ ಆರ್.ಎಸ್ ಬೆಂಗಳೂರು ಪಕ್ಷದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬೈಂದೂರು ತಾಲ್ಲೂಕು ಆಡಳಿತ ಸೌಧದದಿಂದ ಕಿರಿಮಂಜೇಶ್ವರದ ವರೆಗೆ ಬೈಕ್ ಜಾಥಾ ನಡೆಸಲಾಯಿತು. ಜಾಥಾದಲ್ಲಿ ನೂರಾರು ರೈತರು ಭಾಗವಹಿಸಿದ್ದರು. ಅರುಣ್ ಕುಮಾರ್ ಶಿರೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.