ADVERTISEMENT

ಕುಂದಾಪುರ: ಸುರಕ್ಷಿತವಾಗಿ ಸಮುದ್ರ ಸೇರಿದ ಕಡಲಾಮೆ ಮರಿಗಳು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 16:59 IST
Last Updated 18 ಮಾರ್ಚ್ 2021, 16:59 IST
ಮೊಟ್ಟೆಯಿಂದ ಹೊರಬಂದಿರುವ ಕಡಲಾಮೆಯ ಮರಿಗಳು
ಮೊಟ್ಟೆಯಿಂದ ಹೊರಬಂದಿರುವ ಕಡಲಾಮೆಯ ಮರಿಗಳು   

ಕುಂದಾಪುರ (ಉಡುಪಿ): ಕೋಡಿ ಸಮುದ್ರ ಕಿನಾರೆಯಲ್ಲಿ ಬುಧವಾರ ಮಧ್ಯರಾತ್ರಿಮೊಟ್ಟೆಯಿಂದಹೊರಬಂದ ಕಡಲಾಮೆಯ ಮರಿಗಳು ಸುರಕ್ಷಿತವಾಗಿ ಕಡಲು ಸೇರಿದವು.

ಜ.24 ಹಾಗೂ 26 ರಂದು ಕೋಡಿ ಬೀಚ್‌ನಲ್ಲಿ ಅಪರೂಪದ ಆಲೀವ್ ರಿಡ್ಲೆ ಪ್ರಬೇಧದ ಕಡಲಾಮೆಗಳು 2 ಕಡೆಗಳಲ್ಲಿ ಮೊಟ್ಟೆ ಇಟ್ಟಿದ್ದವು. ಈ ಗೂಡುಗಳಿಂದ ಸುಮಾರು 100ಕ್ಕೂ ಹೆಚ್ಚು ಮರಿಗಳು ಹೊರಬಂದಿದ್ದು ಸಮುದ್ರ ಸೇರಿವೆ.

ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌, ಎಫ್‌ಎಸ್‌ಎಲ್‌ ಇಂಡಿಯಾ, ರೀಫ್ ವಾಚ್‌ ಸಂಘಟನೆ, ಸ್ಥಳೀಯ ಮೀನುಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ 2 ತಿಂಗಳಿನಿಂದ ಕಡಲಾಮೆಯ ಮೊಟ್ಟೆಗಳ ಸಂರಕ್ಷಣೆಯ ಹೊಣೆ ಹೊತ್ತಿದ್ದರು. ಪ್ರಾಣಿಗಳಿಂದ ಮೊಟ್ಟೆಗಳ ರಕ್ಷಣೆಗೆ ಹ್ಯಾಚರಿಯ ಸುತ್ತಲೂ ತಂತಿ ಅಳವಡಿಸಲಾಗಿತ್ತು. ಜಾಗೃತಿ ಫಲಕಗಳನ್ನು ಹಾಕಲಾಗಿತ್ತು.

ADVERTISEMENT

ಬುಧವಾರ ರಾತ್ರಿ ಗೂಡುಗಳಿಂದ ಮರಿಗಳು ಹೊರಬರುತ್ತಿರುವುದನ್ನು ಗಮನಿಸಿದ ಪರಿಸರ ಕಾರ್ಯಕರ್ತರು ಆಮೆಗಳು ಸುರಕ್ಷಿತವಾಗಿ ಕಡಲು ಸೇರಲು ಅನುವು ಮಾಡಿಕೊಟ್ಟರು. ಬೆಳಗಿನ ಜಾವದವರೆಗೂ ಕಾರ್ಯಾಚರಣೆ ನಡೆಯಿತು. ಕೋಡಿ ಕಿನಾರೆಯಲ್ಲಿ ಇನ್ನೂ 9 ಕಡಲಾಮೆ ಗೂಡುಗಳಿದ್ದು, ಕೆಲವೇ ದಿನಗಳಲ್ಲಿ ಮೊಟ್ಟೆಯಿಂದ ಮರಿಗಳು ಹೊರಬರಲಿವೆ.

ಕಡಲಾಮೆ ಸಂರಕ್ಷಣಾ ಕೇಂದ್ರ ಸ್ಥಾಪನೆಯಾಗಲಿ: ಅಳಿವಿನಂಚಿನಲ್ಲಿರುವ ಆಲಿವ್ ರಿಡ್ಲೆ ಕಡಲಾಮೆಗಳು ಸ್ವಚ್ಛ ಪರಿಸರದಲ್ಲಿ ಹಾಗೂ ಮಾನವ ಹಸ್ತಕ್ಷೇಪವಿಲ್ಲದ ಜಾಗದಲ್ಲಿ ಮಾತ್ರ ಮೊಟ್ಟೆಗಳನ್ನು ಇಡುತ್ತದೆ. ಅಪರೂಪದ ಪ್ರಬೇಧವಾದ ರಿಡ್ಲೆ ರಕ್ಷಣೆಗೆ ಕರಾವಳಿಯಲ್ಲಿ ಕಡಲಾಮೆ ಸಂರಕ್ಷಣಾ ಕೇಂದ್ರ ತೆರೆಯುವಂತೆ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.