ಪಡುಬಿದ್ರಿ: ಉಚ್ಚಿಲ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ –ಉಚ್ಚಿಲ ದಸರಾ ಮಹೋತ್ಸವ’ದ 7ನೇ ದಿನವಾದ ಭಾನುವಾರ ದೇಗುಲಕ್ಕೆ ಭಕ್ತರ ದಂಡು ಹರಿದುಬಂದಿತ್ತು.
ಬೆಳಿಗ್ಗೆಯಿಂದ ರಾತ್ರಿವರೆಗೂ ಭಕ್ತರು ತಂಡೋಪತಂಡವಾಗಿ ಬಂದು ಮಾತೆ ಕಾಲರಾತ್ರಿ ದೇವಿ ಆರಾಧನೆಯೊಂದಿಗೆ ಶ್ರೀ ದೇವಳದ ನವದುರ್ಗೆಯರ ದರ್ಶನ ಪಡೆದರು.
ವಿವಿಧ ಧಾರ್ಮಿಕ ಕಾರ್ಯಕ್ರಮ, ಭಜನಾ ಸಂಕೀರ್ತನೆ, ನೃತ್ಯ ವಿದುಷಿ ದೀಕ್ಷಾ ವಿ. ಚಾಂತಾರು ಅವರಿಂದ ನೃತ್ಯ ಪ್ರದರ್ಶನ, ರಾಗಸಂಗಮ-ಗಣೇಶ್ ಎರ್ಮಾಳ್ ಮತ್ತು ಬಳಗದಿಂದ ಭಕ್ತಿಗೀತಾಂಜಲಿ ಸಂಗೀತ ಕಾರ್ಯಕ್ರಮ ನಡೆಯಿತು.
ಮೇಳೈಸಿದ ಕುಣಿತ ಭಜನೆ: ದಸರಾ ಪ್ರಯುಕ್ತ ಆಯೋಜಿಸಿದ ಮಹಾಲಕ್ಷ್ಮಿ ದೇವಸ್ಥಾನದ ಪ್ರಾಂಗಣದ ಸುತ್ತ ನಡೆದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಶ್ರೀ ಕ್ಷೇತ್ರದ ರಥಬೀದಿಯಲ್ಲಿ ನಡೆದ ಸಾಮೂಹಿಕ ಕುಣಿತ ಭಜನೆ ಭಕ್ತಿ ಭಾವವನ್ನು ಉಂಟು ಮಾಡಿತು.
ಕುಣಿತ ಭಜನೆಯಲ್ಲಿ ಹಲವಾರು ತಂಡಗಳ ಸಾವಿರಾರು ಮಂದಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ.ಶಂಕರ್ ಅವರು ದೇವಳದ ಮುಂಭಾಗದ ವೇದಿಕೆಯಲ್ಲಿ ನಡೆಯುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಅಂತರರಾಷ್ಟ್ರೀಯ ಪವರ್‌ಲಿಫ್ಟರ್, ಆಲ್ ಇಂಡಿಯಾ ಪವರ್‌ಲಿಫ್ಟಿಂಗ್ ಫೆಡರೇಷನ್ ಅಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ ಅವರನ್ನು ಈ ಸಂದರ್ಭ ಜಿ.ಶಂಕರ್ ಸನ್ಮಾನಿಸಿ, ಗೌರವಿಸಿದರು.
ಬಾಲಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಉಮೇಶ್ ಗಟ್ಟಿ, ಉಚ್ಚಿಲ ದಸರಾ ಕುಸ್ತಿ ಸ್ಪರ್ಧೆಯ ಸಂಚಾಲಕ ವಿಜಯ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು, ಸತೀಶ್ ಕುಂದರ್ ಮಲ್ಪೆ, ಸತೀಶ್ ಅಮೀನ್ ಪಡುಕರೆ, ಶೋಭೇಂದ್ರ ಸಸಿಹಿತ್ಲು ಇದ್ದರು.
ವಾಹನ ದಟ್ಟಣೆ: ಭಾನುವಾರ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ದಟ್ಟಣೆ ಉಂಟಾಯಿತು. ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ, ಸ್ವಯಂ ಸೇವಕರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ಉಡುಪಿ-ಉಚ್ಚಿಲ ದಸರಾ: ದಾಂಡಿಯಾ ನೃತ್ಯ
ಪಡುಬಿದ್ರಿ: ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನದ ಉಡುಪಿ–ಉಚ್ಚಿಲ ದಸರಾದಲ್ಲಿ ಶನಿವಾರ ಕ್ಷೇತ್ರದ ರಥಬೀದಿಯ ಸುತ್ತ ಸಾರ್ವಜನಿಕರಿಂದ ಆಯೋಜಿಸಲಾಗಿದ್ದ ‘ಸಾಮೂಹಿಕ ದಾಂಡಿಯಾ ನೃತ್ಯ’ ನೋಡುಗರ ಗಮನ ಸೆಳೆಯಿತು.
ಕ್ಷೇತ್ರದ ರಥಬೀದಿಯ ಸುತ್ತ ಮಹಿಳೆಯರು, ಮಕ್ಕಳು, ಯುವಕ–ಯುವತಿಯರು ಸಂಭ್ರಮದಿಂದ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿದರು. ನೃತ್ಯ ನೋಡಲೆಂದೇ ಸಾಕಷ್ಟು ಜನರು ದೇವಸ್ಥಾನಗಳ ಸುತ್ತಮುತ್ತ ಜಮಾಯಿಸಿದ್ದು, ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ವಿದೇಶಿಯರು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕಿ ವಿಶೇಷ ಗಮನ ಸೆಳೆದರು. ಡಾ.ನಾಡೋಜ ಜಿ.ಶಂಕರ್, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ದಾಂಡಿಯಾ ನೃತ್ಯಕ್ಕೆ ಚಾಲನೆ ನೀಡಿದರು.
ಇದಕ್ಕೂ ಮೊದಲು ದಸರಾ ಸಮಾರಂಭಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ನವದುರ್ಗೆಯರು ಹಾಗೂ ಶಾರದಾ ಮಾತೆಯ ವಿಗ್ರಹವನ್ನು ನಿರ್ಮಾಣ ಮಾಡಿದ ಕುಬೇರ ಅವರನ್ನು ಸ್ಮರಣಿಕೆ, ಶಾಲು ಹೊದಿಸಿ ಗೌರವಿಸಲಾಯಿತು.
ಇದೇ ವೇಳೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಗಣೇಶ್ ಕಾಂಚನ್, ದಿಲೀಪ್ ಮುಲ್ಕಿ, ದಯಾವತಿಪುತ್ರನ್, ಪ್ರೀತಿ ಶ್ರೀಯಾನ್, ಶೈಲಜಾಮೆಂಡನ್, ಪ್ರಾಪ್ತಿ ಸುವರ್ಣ, ಸುರೇಖಾಪುತ್ರನ್, ಸುಧಾಕರ ಕರ್ಕೇರ ಅವರನ್ನು ಜಿ.ಶಂಕರ್ ಸನ್ಮಾನಿಸಿದರು.
ಇಂದಿನ ಕಾರ್ಯಕ್ರಮ ದಸರಾ ಮಹೋತ್ಸವದ 8ನೇ ದಿನವಾದ ಸೆ. 29ರಂದು ಮಾತೆ ಶ್ರೀ ಮಹಾಗೌರಿ ದೇವಿ ಆರಾಧನೆಯೊಂದಿಗೆ ಬೆಳಿಗ್ಗೆ ಉದಯ ಪೂಜೆ ಬೆಳಿಗ್ಗೆ 9ರಿಂದ ನಿತ್ಯ ಚಂಡಿಕಾ ಹೋಮ ಮಧ್ಯಾಹ್ನ ನವದುರ್ಗೆಯರಿಗೆ ಮಹಾಮಂಗಳಾರತಿ 12.30ಕ್ಕೆ ಮಹಾಪೂಜೆ ಅನ್ನಸಂತರ್ಪಣೆ ಸಂಜೆ 6.30ರಿಂದ ಪ್ರಸಾದ ವಿತರಣೆ 8.30ಕ್ಕೆ ಶ್ರೀ ಸರಸ್ವತೀ ಕಲ್ಪೋಕ್ತ ಪೂಜೆ ಸಹಿತ ಧಾರ್ಮಿಕ ವಿಧಿಗಳು ಸಂಪನ್ನಗೊಳ್ಳಲಿವೆ. ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ಭಜನಾ ಸಂಕೀರ್ತನೆ 12ರಿಂದ ಭಕ್ತಿ ಗೀತಾಂಜಲಿ 3.45ರಿಂದ ನೃತ್ಯ ಸಂಜೆ 5 ಗಂಟೆಯಿಂದ ಆಧ್ಯಾತ್ಮಿಕದಲ್ಲಿ ವ್ಯಕ್ತಿತ್ವ ವಿಕಸನ ಕುರಿತು ನರೇಂದ್ರ ಕುಮಾರ್ ಕೋಟ ಅವರಿಂದ ಧಾರ್ಮಿಕ ಉಪನ್ಯಾಸ 5.45ರಿಂದ ಸಾಮೂಹಿಕ ಕುಂಕುಮಾರ್ಚನೆ 6.30ರಿಂದ ಭರತನಾಟ್ಯ ಮತ್ತು ಜಾನಪದ ನೃತ್ಯ 8ರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.