ADVERTISEMENT

ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಗುರುಪಾದ ಕಾಣಿಕೆ ಸಮರ್ಪಣೆ ವೈಭವ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 2:47 IST
Last Updated 2 ಮಾರ್ಚ್ 2026, 2:47 IST
ಪುತ್ಥಳಿ ನಿರ್ಮಾಣದ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣೆಗೆ ಜಿ.ಶಂಕರ್ ಚಾಲನೆ ನೀಡಿದರು. ಜಯ ಸಿ ಕೋಟ್ಯಾನ್ ಮತ್ತಿತರರು ಪಾಲ್ಗೊಂಡಿದ್ದರು
ಪುತ್ಥಳಿ ನಿರ್ಮಾಣದ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣೆಗೆ ಜಿ.ಶಂಕರ್ ಚಾಲನೆ ನೀಡಿದರು. ಜಯ ಸಿ ಕೋಟ್ಯಾನ್ ಮತ್ತಿತರರು ಪಾಲ್ಗೊಂಡಿದ್ದರು   

ಪಡುಬಿದ್ರಿ: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ₹ 3 ಕೋಟಿ ವೆಚ್ಚದಲ್ಲಿ ಪ್ರತಿಷ್ಠಾಪಿಸಲಿರುವ ಮೊಗವೀರ ಸಮಾಜದ ಗುರುಪರಂಪರೆಯ 9 ತಲೆಮಾರಿನ ಗುರುಗಳಾದ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಸ್ಥಾಪನೆ ಅಂಗವಾಗಿ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣಾ ಸಮಾರಂಭ ಭಾನುವಾರ ನಡೆಯಿತು.

ಸಮಾರಂಭ ಉದ್ಘಾಟಿಸಿದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವಾಧ್ಯಕ್ಷ ಜಿ.ಶಂಕರ್ ಮಾತನಾಡಿ, ಮೊಗವೀರ ಸಮುದಾಯದ ಗುರುಪರಂಪರೆಯ ಕೊನೆಯ ಗುರುಗಳ ಪುತ್ಥಳಿಯನ್ನು ಪ್ರತಿಷ್ಠಾಪನೆ ಸಮುದಾಯದ ಏಕತೆಯ ಸಂಕೇತ ಆಗಬೇಕು, ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಬೇಕು. ಕ್ಷೇತ್ರ ಪ್ರವಾಸೋದ್ಯಮ ಹಾಗೂ ಶಕ್ತಿಕೇಂದ್ರವಾಗಿ ಬೆಳೆಯಲು ಇದು ನೆರವಾಗಲಿದೆ ಎಂದರು.

ದಸರಾ ಸಂದರ್ಭದಲ್ಲಿ 30 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆಯಾಗಲಿದೆ. ಮುಂಬರುವ ದಿನಗಳಲ್ಲಿ ಬಕ್ವಾಡಿಯಲ್ಲಿ ಗುರುಗಳ ಪ್ರತಿಮೆ ಸ್ಥಾಪನೆ ಕಾರ್ಯಗಳು ನಡೆಯಲಿವೆ ಎಂದು ಹೇಳಿದ ಅವರು ಮಹಾಲಕ್ಷ್ಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ₹ 3 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದು ಈಗಾಗಲೇ ₹ 10 ಲಕ್ಷ ಬಿಡುಗಡೆ ಆಗಿದೆ ಎಂದರು.

ADVERTISEMENT

₹ 10 ಕೋಟಿ ಬಿಡುಗಡೆ ಆಗಲಿ

ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಕರಾವಳಿಯ ಹಿಂದುಳಿದ ವರ್ಗಗಳ, ವಿಶೇಷವಾಗಿ ಶ್ರಮಜೀವಿಗಳಾದ ಮೀನುಗಾರ ಸಮುದಾಯದ ಕುರಿತು ಚಿಂತನೆ ನಡೆಸಬೇಕು. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹಾಲಕ್ಷ್ಮಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ₹ 25 ಕೋಟಿ ಅನುದಾನ ನೀಡಿ ಕರಾವಳಿ ಮೀನುಗಾರ ಸಮುದಾಯದೊಂದಿಗೆ ನಿಂತಿದ್ದರು. ಈಗಿನ ಸರ್ಕಾರ ₹10 ಕೋಟಿ ಅನುದಾನ ನೀಡಬೇಕು ಎಂದರು.

ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಮಾತನಾಡಿ, ಮೊಗವೀರ ಸಮುದಾಯದ ಭದ್ರ ಬುನಾದಿ ಗುರುಪರಂಪರೆಯ ತಳಹದಿಯಲ್ಲೇ ನಿರ್ಮಾಣವಾಗಿದೆ. ಗುರುಗಳ ಮಾರ್ಗದರ್ಶನದಲ್ಲಿ ಆಚಾರ-ವಿಚಾರದ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಬಲವರ್ಧನೆ ದೊರೆತಿದೆ. ಗುರುಗಳ ಕೊಡುಗೆ ಸಮಾಜ ಸಂಘಟನೆಗೆ ಶಕ್ತಿಯಾಗಿದೆ ಎಂದರು.

ಜಿ. ಶಂಕರ್ ಅವರ ಪರಿಕಲ್ಪನೆ: ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಮನೋಜ್ ಸಾಲ್ಯಾನ್ ಪ್ರಸ್ತಾವಿಕವಾಗಿ ಮಾತನಾಡಿ, ಗುರುಗಳ ಈ ಕಾರ್ಯಗಳ ಹಿಂದೆ ಸಮುದಾಯದ ಏಕತೆ, ಗುರುಭಕ್ತಿ ಮತ್ತು ಪರಂಪರೆಯ ಪ್ರಾಮುಖ್ಯತೆಯಿದೆ. ಜಿ.ಶಂಕರ್ ಅವರ ಪರಿಕಲ್ಪನೆಯಲ್ಲಿ ಗುರುಗಳ ಕಂಚಿನ ಪುತ್ಥಳಿ ನಿರ್ಮಾಣವಾಗುತ್ತಿದೆ ಎಂದರು.

ಮುಖಂಡರಾದ ಮೋಹನ್ ಬೆಂಗ್ರೆ, ಹರಿಯಪ್ಪ ಕೋಟ್ಯಾನ್, ಯುವರಾಜ್ ಸಾಲ್ಯಾನ್, ಪ್ರಸಾದ್ ರಾಜ್ ಕಾಂಚನ್, ಗಿರಿಧರ್ ಸುವರ್ಣ, ರಮೇಶ್ ಕಾಂಚನ್, ಸದಾನಂದ ಬಂಗೇರ, ಉದಯ ಕುಮಾರ್, ಹಟ್ಟಿಂಗಡಿ, ಅನಿಲ್ ಕುಮಾರ್, ಬೊಕ್ಕಪಟ್ಣ, ಚೇತನ್ ಬೆಂಗ್ರೆ, ಮಲ್ಪೆಯ ಪರ್ಸಿನ್ ಮೀನುಗಾರರ ಸಂಘದ ನಾಗರಾಜ್, ದಿನೇಶ್ ಎರ್ಮಾಳ್, ಸತೀಶ್ ಅಮೀನ್, ಬೆಣ್ಣೆಕುದ್ರು, ಸಂಧ್ಯಾ ಸುನೀಲ್, ಕವಿತಾ ಶರತ್, ಸುಗುಣ, ಮೂಳೂರು, ರಾಜೇಶ್ ಪುತ್ರನ್ ಮಂಗಳೂರು, ಪವನ್ ಆನಂದ್, ಸತೀಶ್ ಕುಂದರ್ ಉಡುಪಿ, ಸದಾನಂದ, ಬಳ್ಕೂರು, ವೇದಪ್ರಕಾಶ್ ಶ್ರೀಯಾನ್, ಸೌದಿ ಅರೇಬಿಯಾ ಮೊಗವೀರ ಮಹಾಸಭಾದ ಅಧ್ಯಕ್ಷ ರವಿ ಕರ್ಕೇರ, ಶಶಿಕುಮಾರ್ ಬೆಂಗ್ರೆ, ಬೇಬಿ ಸಾಲ್ಯಾನ್, ಭಾಸ್ಕರ್ ಸಾಲ್ಯಾನ್, ಅಧ್ಯಕ್ಷರು, ತೀರ್ಥಹಳ್ಳಿ ಮೊಗವೀರ ಸಂಘದ ಅಧ್ಯಕ್ಷ ರವಿ ಕರ್ಕೇರ, ಮೊಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ರವೀಶ್ ಕೊರವಡಿ ಇದ್ದರು. ಮೊಗವೀರ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ನಿರ್ವಹಿಸಿದರು. ಧರ್ಮರಾಜ್ ಪ್ರಾರ್ಥಿಸಿದರು.

ದ್ವಿಚಕ್ರ ವಾಹನ ಜಾಥಾ

ಕಾರ್ಯಕ್ರಮದ ಅಂಗವಾಗಿ ಮೊಗವೀರ ಸಮಾಜದ ಯುವಕರು ದ್ವಿಚಕ್ರ ವಾಹನ ರ‍್ಯಾಲಿ ನಡೆಸಿದರು. ಉಚ್ಚಿಲ ಕ್ಷೇತ್ರದ ಉತ್ತರ ಭಾಗದಲ್ಲಿರುವ ಪಾಂಗಾಳ ರಾಷ್ಟ್ರೀಯ ಹೆದ್ದಾರಿಯ ಪಾಂಗಳ ಲಕ್ಷ್ಮಿ ಜನಾರ್ದನ ದೇವಸ್ಥಾನದ ಆವರಣದಿಂದ ಹಾಗೂ ದಕ್ಷಿಣ ಭಾಗದಲ್ಲಿರುವ ಹೆಜಮಾಡಿ ಟೋಲ್ ಪ್ಲಾಜಾದಿಂದ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಉಚ್ಚಿಲ ದೇವಸ್ಥಾನವರೆಗೆ ರ‍್ಯಾಲಿ ನಡೆಯಿತು. ಗುರುಗಳ ಪುತಳಿ ನಿರ್ಮಾಣವಾಗುತ್ತಿರುವ ದೇವಸ್ಥಾನದ ಮುಂಭಾಗದಲ್ಲಿ ಸಾಮೂಹಿಕ ಗುರುಪಾದ ಕಾಣಿಕೆ ಸಮರ್ಪಣೆಗೆ ಜಿ.ಶಂಕರ್ ಚಾಲನೆ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಯ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.