ಉಡುಪಿ: ಕರಾವಳಿಯಲ್ಲಿ ಬಿಸಿಲ ಬೇಗೆ ಹೆಚ್ಚುತ್ತಿದ್ದಂತೆ ಜಲ ಮೂಲಗಳೆಲ್ಲವೂ ಬತ್ತುತ್ತಿವೆ. ಇದರಿಂದ ಮನುಷ್ಯರಂತೆ ಪಕ್ಷಿಗಳು ಕೂಡ ನೀರಿನ ದಾಹದಿಂದ ಚಡಪಡಿಸುತ್ತಿವೆ.
ಇತ್ತೀಚಿನ ದಿನಗಳಲ್ಲಿ ಪಕ್ಷಿಗಳಿಗೆ ನೀರಿಡುವ ಪ್ರವೃತ್ತಿ ನಗರ ಪ್ರದೇಶದ ಜನರಲ್ಲಿ ಜಾಸ್ತಿ ಆಗುತ್ತಿದ್ದರೂ ಬಹುತೇಕರು ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.
ಬಿಸಿಲಿನ ಧಗೆ ಹೆಚ್ಚಾದಾಗ ದೇಹದ ಉಷ್ಣಾಂಶ ಕಡಿಮೆ ಮಾಡಲು ಮತ್ತು ದಾಹ ನೀಗಿಸಿಕೊಳ್ಳಲು ಪಕ್ಷಿಗಳು ನೀರಿನಾಸರೆಯನ್ನು ಅರಸುತ್ತವೆ. ಇಂತಹ ಸಂದರ್ಭದಲ್ಲಿ ಮನೆಗಳ ಹೂದೋಟದಲ್ಲಿ, ತಾರಸಿಗಳ ಮೇಲೆ ಪಾತ್ರೆಯಲ್ಲಿ ನೀರಿಟ್ಟರೆ ಅವುಗಳಿಗೆ ಆಸರೆಯಾಗುತ್ತದೆ.
ನಗರ ಪ್ರದೇಶದಲ್ಲಿ ಹೆಚ್ಚು ಮರ, ಗಿಡಗಳಿರುವ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ನಗರ ಸಭೆಯವರು ಸಣ್ಣ ಸಣ್ಣ ಪಾತ್ರೆಗಳಲ್ಲಿ ನೀರು ಇಡುವ ಮೂಲಕ ಪಕ್ಷಿಗಳ ನೀರಡಿಕೆ ನೀಗಿಸಲು ಮುಂದಾಗಬೇಕು ಎನ್ನುತ್ತಾರೆ ಪಕ್ಷಿ ಪ್ರೇಮಿಗಳು.
ಬುಲ್‌ಬುಲ್, ಕೆಂಬೂತ, ಗೋಲ್ಡನ್ ಒರಿಯೋಲ್, ಬಾರ್ಬೆಟ್, ಮುನಿಯ ಮೊದಲಾದ ಹಕ್ಕಿಗಳು ಸಾಮಾನ್ಯವಾಗಿ ಮನೆಗಳ ಪರಿಸರದಲ್ಲಿ ಕಂಡು ಬರುತ್ತವೆ. ನಗರ ಪ್ರದೇಶದಲ್ಲೂ ಇವುಗಳು ಸಾಮಾನ್ಯವಾಗಿವೆ. ಮನೆಯ ತಾರಸಿಯಲ್ಲಿ ನೀರಿಟ್ಟರೆ ಇವುಗಳು ಅದರಲ್ಲಿ ಸ್ನಾನ ಮಾಡುವ ಮೂಲಕ ಧಗೆ ನೀಗಿಸಿಕೊಳ್ಳುತ್ತವೆ.
‘ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿದೆ. ಈ ಕಾರಣಕ್ಕೆ ಹೆಚ್ಚಿನ ಮನೆಯವರು ಬೇಸಿಗೆ ಕಾಲದಲ್ಲಿ ಹಕ್ಕಿಗಳಿಗೆ ನೀರಿಡುತ್ತಾರೆ. ಪಕ್ಷಿಗಳಿಗೆ ನೀರಿಡುವವರು ಹೆಚ್ಚು ಆಳವಿಲ್ಲದ ಪಾತ್ರೆಗಳಲ್ಲಿ ನೀರಿಡಬೇಕು. ಆಳವಿದ್ದರೆ ಅವುಗಳು ಹೆದರಿ ಅದರ ಬಳಿ ಬರುವುದಿಲ್ಲ ಎನ್ನುತ್ತಾರೆ ಕುಂದಾಪುರದ ಬಂಡಾರ್ಕರ್ಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಪಕ್ಷಿತಜ್ಞ ವಿ. ಲಕ್ಷ್ಮಿನಾರಾಯಣ ಉಪಾಧ್ಯ.
ಗಾಢ ಬಣ್ಣದ ಪಾತ್ರೆಗಳು ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸಬಾರದು ಅವುಗಳನ್ನು ನೋಡಿದರೆ ಪಕ್ಷಿಗಳು ಹೆದರಿ ಸಮೀಪಕ್ಕೆ ಬರುವುದಿಲ್ಲ. ಮನೆ ಮುಂದೆ ಇರುವ ಮರಗಳಿಗೂ ಸಣ್ಣ ಪಾತ್ರೆಗಳನ್ನು ಕಟ್ಟಿ ನೀರಿಡಬಹುದು ಎಂದು ಹೇಳುತ್ತಾರೆ ಅವರು.
ಪಾತ್ರೆಯಲ್ಲಿ ನೀರಿಟ್ಟರೆ ಸನ್ ಬರ್ಡ್ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಮನೆಯ ಮುಂದಿನ ಹೂವಿನ ಗಿಡಗಳ ಎಲೆಗಳಿಗೆ ನೀರು ಸಿಂಪಡಿಸಬೇಕು. ಅವುಗಳು ಎಲೆಯ ಮೇಲೆ ನಿಂತಿರುವ ನೀರಿನಲ್ಲಿ ಹೊರಳಾಡಿ ಸ್ನಾನ ಮಾಡುತ್ತವೆ. ಇನ್ನು ಕೆಲವು ಹಕ್ಕಿಗಳು ಹೊಗೆಯಲ್ಲಿ ಹೊರಳಾಡುವ ಮೂಲಕವೂ ಸ್ನಾನ ಮಾಡಿಕೊಳ್ಳುತ್ತೇವೆ ಎಂದು ಅವರು ಹೇಳುತ್ತಾರೆ.
ಮೈನಾ ನೀರು ಕೋಳಿ ಕಾಜಾಣ ಕೊಳ ಬಕ ಮೊದಲಾದ ಹಕ್ಕಿಗಳು ಸಾಮಾನ್ಯವಾಗಿ ಮನೆ ಪರಿಸರಕ್ಕೆ ಬರುತ್ತವೆ. ಅವುಗಳ ನೀರಡಿಕೆ ನೀಗಿಸಲು ಸಣ್ಣ ಮಣ್ಣಿನ ಬಟ್ಟಲಾಕಾರದ ಪಾತ್ರಗಳಲ್ಲಿ ನೀರಿಟ್ಟರೆ ಉತ್ತಮ. ಉಪಯೋಗ ಶೂನ್ಯವಾದ ಅರೆಯುವ ಕಲ್ಲಿನಲ್ಲೂ ನೀರಿಡಬಹುದುವಿ. ಲಕ್ಷ್ಮಿನಾರಾಯಣ ಉಪಾಧ್ಯ ಪಕ್ಷಿತಜ್ಞ
ಬೇಸಿಗೆಯಲ್ಲಿ ಹಕ್ಕಿಗಳಿಗೆ ನೀರಿಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ನೀರು ಇಡುವವರು ಬೆಕ್ಕು ನಾಯಿಗಳಿಗೆ ಎಟಕುವ ಜಾಗದಲ್ಲಿ ಇಡಬಾರದು. ಅವುಗಳು ಹಕ್ಕಿಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇರುತ್ತದೆತೇಜಸ್ವಿ ಎಸ್. ಆಚಾರ್ಯ ಟ್ರಸ್ಟಿ ಮಣಿಪಾಲ ಬರ್ಡಿಂಗ್ ಆ್ಯಂಡ್ ಕನ್ಸರ್ವೇಶನ್ ಟ್ರಸ್ಟ್
‘ಮಲ್ಯಾಡಿಯಿಂದ ದೂರವಾಗುತ್ತಿವೆ ಪಕ್ಷಿಗಳು’
ಕುಂದಾಪುರ ತಾಲ್ಲೂಕಿನ ಮಲ್ಯಾಡಿಗೆ ಈ ಹಿಂದೆ ಬಹಳಷ್ಟು ವಲಸೆ ಹಕ್ಕಿಗಳು ಬರುತ್ತಿದ್ದವು. ಆದರೆ ಈಗ ಅಲ್ಲಿಗೆ ಬರುವ ಪಕ್ಷಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ ಎನ್ನುತ್ತಾರೆ ಪಕ್ಷಿವೀಕ್ಷಕರು. ಹಂಚಿನ ಕಾರ್ಖಾನೆಗಳಿಗೆ ಆವೆ ಮಣ್ಣು ತೆಗೆದಿರುವುದರಿಂದ ಹೊಂಡ ನಿರ್ಮಾಣವಾಗಿ ಮಲ್ಯಾಡಿ ಪರಿಸರದಲ್ಲಿ ನೀರಿನ ಸಂಗ್ರಹವಿತ್ತು. ಅಲ್ಲಿಗೆ ವಿವಿಧ ಬಗೆಯ ಪಕ್ಷಿಗಳು ಬರುತ್ತಿದ್ದವು. ಪಕ್ಷಿ ವೀಕ್ಷಕರಿಗೆ ಅವುಗಳನ್ನು ನೋಡುವುದೇ ಹಬ್ಬವಾಗಿತ್ತು ಎನ್ನುತ್ತಾರೆ ಲಕ್ಷ್ಮಿನಾರಾಯಣ ಉಪಾಧ್ಯ. ಈಚೆಗೆ ವಾರಾಹಿ ನೀರು ಈ ಹೊಂಡಗಳಿಗೆ ಹರಿದು ನೀರಿನ ಮಟ್ಟ ಹೆಚ್ಚಾಗಿದೆ. ಈ ಕಾರಣಕ್ಕೆ ಅನೇಕ ಬಗೆಯ ಪಕ್ಷಿಗಳು ಇಲ್ಲಿಗೆ ಬರುವುದನ್ನೇ ನಿಲ್ಲಿಸಿವೆ. ನೀರಿನ ಮಟ್ಟ ಹೆಚ್ಚಾದಾಗ ಪಕ್ಷಿಗಳಿಗೆ ಆಹಾರ ಸಿಗುವುದಿಲ್ಲ. ಆ ಕಾರಣಕ್ಕೆ ಅವುಗಳು ಬರುವುದಿಲ್ಲ. ನೀರಿನ ಮಟ್ಟ ಕಡಿಮೆ ಇದ್ದರೆ ಮೀನು ಏಡಿಗಳು ಅವುಗಳಿಗೆ ಯಥೇಚ್ಛವಾಗಿ ದೊರಕುತ್ತವೆ. ಅಲ್ಲಿಗೆ ಬರುವ ಪಕ್ಷಿಗಳ ಸಂಖ್ಯೆಯು ಜಾಸ್ತಿಯಾಗುತ್ತದೆ ಎನ್ನುತ್ತಾರೆ ಅವರು. ಮಲ್ಯಾಡಿಯನ್ನು ಜಿಲ್ಲೆಯಲ್ಲಿ ಅತ್ಯುತ್ತಮ ಪಕ್ಷಿಧಾಮವಾಗಿ ಅಭಿವೃದ್ಧಿ ಮಾಡಬಹುದಿತ್ತು. ಆದರೆ ಅದಕ್ಕೆ ಯಾರೂ ಆಸಕ್ತಿ ತೋರಿಸಿಲ್ಲ. ಕ್ರಮೇಣ ಅಲ್ಲಿಗೆ ಬರುವ ಹಕ್ಕಿಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಹೇಳುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.