ADVERTISEMENT

ಉಡುಪಿ: ಸರ್ವಜ್ಞ ಪೀಠವೇರಿದ ಅದಮಾರು ಈಶಪ್ರಿಯ ತೀರ್ಥರು

ಶ್ರೀಕೃಷ್ಣ ಮಠದಲ್ಲಿ ಅದಮಾರು ಪರ್ಯಾಯ ಆರಂಭ * ಮೆರವಣಿಗೆಯಲ್ಲಿ ಸಾಂಸ್ಕೃತಿಕ ವೈಭವ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 2:00 IST
Last Updated 18 ಜನವರಿ 2020, 2:00 IST
ಈಶಪ್ರಿಯ ತೀರ್ಥರು
ಈಶಪ್ರಿಯ ತೀರ್ಥರು   

ಉಡುಪಿ: ಅದಮಾರು ಮಠದ ಈಶಪ್ರಿಯ ತೀರ್ಥರು ಶನಿವಾರ ಬೆಳಗಿನ ಜಾವ ಕೃಷ್ಣಮಠದಲ್ಲಿ ಪವಿತ್ರ ಸರ್ವಜ್ಞ ಪೀಠಾರೋಹಣ ಮಾಡಿದರು. ಈ ಮೂಲಕ ಅದಮಾರು ಮಠದ ಪರ್ಯಾಯ ಆರಂಭಗೊಂಡಿತು.

ಇದಕ್ಕೂ ಮೊದಲು ಸಂಪ್ರದಾಯದಂತೆ ಕಾಪುವಿನ ದಂಡತೀರ್ಥಕ್ಕೆ ತೆರಳಿ ಮಧ್ಯರಾತ್ರಿ 1.15ಕ್ಕೆ ಸ್ನಾನ ಮಾಡಿ, 1.20ಕ್ಕೆ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಉಡುಪಿಯ ಜೋಡುಕಟ್ಟೆಯ ಮಂಟಪಕ್ಕೆ ಆಗಮಿಸಿದ ಶ್ರೀಗಳು ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು.

ಇದಾದ ಬಳಿಕ ನಸುಕಿನ 2.15ಕ್ಕೆ ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆಗೆ ಚಾಲನೆ ದೊರೆಯಿತು. ಕರಾವಳಿಯ ಕಲೆ, ಸಂಸ್ಕತಿ ಬಿಂಬಿಸುವ ಟ್ಯಾಬ್ಲೊಗಳು ಗಮನ ಸೆಳೆದವು. ಕರಾವಳಿಯ ಚೆಂಡೆ ನಾದಕ್ಕೆ ನೆರೆದಿದ್ದವರು ಮನಸೋತರು. ಡೊಳ್ಳು ಕುಣಿತ, ಪೂಜಾ ಕುಣಿತ, ಕೋಲಾಟ, ನಗಾರಿ ಸೇರಿದಂತೆ 15ಕ್ಕೂ ಹೆಚ್ಚು ಜಾನಪದ ಕಲಾ ಪ್ರಕಾರಗಳು ಆಕರ್ಷಿಸಿದವು. ಕರಾವಳಿಯ ಮೀನುಗಾರಿಕೆ, ಮಧ್ವಾಚಾರ್ಯರ ಮೂಲಸ್ಥಾನ ಕುಂಜಾರುಗಿರಿ, ಯಕ್ಷಗಾನ, ತುಳುನಾಡು ಸೃಷ್ಟಿಕರ್ತ ಪರಶುರಾಮನ ಟ್ಯಾಬ್ಲೋಗಳು ಆಕರ್ಷಕವಾಗಿದ್ದವು.

ADVERTISEMENT

ಯತಿಗಳ ಪಲ್ಲಕ್ಕಿ ಪ್ರಯಾಣ:ಈ ಬಾರಿಯ ಪರ್ಯಾಯ ಮೆರವಣಿಗೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿತ್ತು. ಮೊದಲಿಗೆ ಬಿರುದಾವಳಿಗಳು, ಜಾನಪದ ಕಲಾ ತಂಡಗಳು ತೆರಳಿದ ನಂತರ ಪರ್ಯಾಯ ಪೀಠಾಧಿಪತಿ ಈಶಪ್ರಿಯ ತೀರ್ಥರನ್ನು ಮೇನೆ (ಪಲ್ಲಕ್ಕಿ)ಯಲ್ಲಿ ಹೊತ್ತೊಯ್ಯಲಾಯಿತು.

ಪೇಟ ತೊಟ್ಟಿದ್ದ ಅದಮಾರು ಶ್ರೀಗಳನ್ನು ಹೂವಿನ ಅಲಂಕೃತ ಪಲ್ಲಕ್ಕಿಯಲ್ಲಿ ಕರೆದೊಯ್ಯಲಾಯಿತು. ನಂತರ ಶಿಷ್ಟಾಚಾರದಂತೆ ಕೃಷ್ಣಾಪುರ ಮಠದಿಂದ ಆರಂಭವಾಗಿ ಪೇಜಾವರ, ಕಾಣಿಯೂರು, ಸೋದೆ ಮಠದ ಯತಿಗಳು ವಾಹನ ಸಹಿತ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ಮೆರವಣಿಗೆ ಸಾಗುವ ಹಾದಿಯ ಎರಡೂ ಇಕ್ಕೆಲಗಳಲ್ಲಿ ಜಮಾಯಿಸಿದ್ದ ಸಾವಿರಾರು ಸಾರ್ವಜನಿಕರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಬೆಳಗಿನ ಜಾವ ಮೆರವಣಿಗೆ ಕೃಷ್ಣಮಠ ತಲುಪಿತು.

ಈ ಸಂದರ್ಭ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಪಲ್ಲಕ್ಕಿಯಲ್ಲಿ ಬಂದ ಅದಮಾರು ಮಠದ ಈಶಪ್ರಿಯ ತೀರ್ಥರನ್ನು ಸ್ವಾಗತಿಸಿ ಬೆಳಿಗ್ಗೆ 4.50ಕ್ಕೆ ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿಸಿದರು. ಬಳಿಕ ಚಂದ್ರಮೌಳೇಶ್ವರ ಹಾಗೂ ಅನಂತೇಶ್ವರ ದರ್ಶನ ಮಾಡಿಸಲಾಯಿತು.

ಬೆಳಿಗ್ಗೆ 5.30ಕ್ಕೆ ಅದಮಾರು ಶ್ರೀಗಳು ಕೃಷ್ಣಮಠ ಪ್ರವೇಶಿಸಿದರು. ನಂತರ 5.57ರ ಶುಭ ಮುಹೂರ್ತದಲ್ಲಿ ಅಕ್ಷಯಪಾತ್ರೆ, ಸುಟ್ಟುಗ ಹಾಗೂ ಗರ್ಭಗುಡಿಯ ಕೀಲಿಕೈ ಪಡೆದು ನಂತರ ಸರ್ವಜ್ಞ ‍ಪೀಠಾರೋಹಣ ಮಾಡಿದರು. ಆ ಕ್ಷಣದಿಂದಲೇ ಅದಮಾರು ಪರ್ಯಾಯಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಮಠದಲ್ಲಿ ವೇದಘೋಷಗಳು ಮೊಳಗಿದವು.

ಮೊದಲ ಪೂಜೆ: ಸರ್ವಜ್ಞ ಪೀಠಾರೋಹಣ ಮಾಡಿದ ಅದಮಾರು ಶ್ರೀಗಳು ಬೆಳಿಗ್ಗೆ 10ಕ್ಕೆ ಕೃಷ್ಣನಿಗೆ ಮೊದಲ ಪರ್ಯಾಯ ಮಹಾಪೂಜೆ ನೆರವೇರಿಸಲಿದ್ದು, ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ನಡೆಯಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ನಾಯಕರು ಭಾಗವಹಿಸಲಿದ್ದಾರೆ.

ಮೊದಲು ಸರ್ವಜ್ಞ ಪೀಠದಲ್ಲಿ ಕುಳಿತ ವಿಶ್ವಪ್ರಿಯ ತೀರ್ಥರು:ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥರು ಮೊದಲು ಸರ್ವಜ್ಞ ಪೀಠದಲ್ಲಿ ಕುಳಿತು ನಂತರ ಶಿಷ್ಯರಾದ ಈಶಪ್ರಿಯ ತೀರ್ಥರಿಗೆ ಸರ್ವಜ್ಞ ಪೀಠವನ್ನು ಬಿಟ್ಟುಕೊಟ್ಟರು. ಬಳಿಕ ಮಾತನಾಡಿದ ವಿಶ್ವಪ್ರಿಯ ತೀರ್ಥರು ಕಿರಿಯ ಶ್ರೀಗಳ ಜತೆ ಸೇರಿ 2 ವರ್ಷ ಕೃಷ್ಣನ ಪೂಜೆ ನೆರವೇರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.