ADVERTISEMENT

ಉಡುಪಿ: ಗರುಡ ಗಮನ, ವೃಷಭ ವಾಹನ ಚಿತ್ರ ಒಪ್ಪಿಕೊಂಡ ಪ್ರೇಕ್ಷಕ; ಚಿತ್ರತಂಡಕ್ಕೆ ಸಂತಸ

ಅಭಿಮಾನಿಗಳನ್ನು ಭೇಟಿಮಾಡಿದ ರಿಷಬ್ ಶೆಟ್ಟಿ, ರಾಜ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 14:28 IST
Last Updated 27 ನವೆಂಬರ್ 2021, 14:28 IST
ಗರುಡ ಗಮನ, ವೃಷಭ ವಾಹನ ಚಿತ್ರ ತಂಡ ಶನಿವಾರ ನಗರದ ಉಡುಪಿಯ ಕಲ್ಪನಾ ಹಾಗೂ ಮಣಿಪಾಲದ ಐನಾಕ್ಸ್‌, ಭಾರತ್ ಸಿನಿಮಾಸ್‌ ಚಿತ್ರಮಂದಿರಗಳಿಗೆ ಭೇಟಿ ನೀಡಿತು.
ಗರುಡ ಗಮನ, ವೃಷಭ ವಾಹನ ಚಿತ್ರ ತಂಡ ಶನಿವಾರ ನಗರದ ಉಡುಪಿಯ ಕಲ್ಪನಾ ಹಾಗೂ ಮಣಿಪಾಲದ ಐನಾಕ್ಸ್‌, ಭಾರತ್ ಸಿನಿಮಾಸ್‌ ಚಿತ್ರಮಂದಿರಗಳಿಗೆ ಭೇಟಿ ನೀಡಿತು.   

ಉಡುಪಿ: ಗರುಡ ಗಮನ, ವೃಷಭ ವಾಹನ ಚಿತ್ರ ತಂಡ ಶನಿವಾರ ನಗರದ ಕಲ್ಪನಾ ಹಾಗೂ ಮಣಿಪಾಲದ ಐನಾಕ್ಸ್‌, ಭಾರತ್ ಸಿನಿಮಾಸ್‌ ಚಿತ್ರಮಂದಿರಗಳಿಗೆ ಭೇಟಿ ನೀಡಿತು.

ಚಿತ್ರದ ನಾಯಕ ನಟ ರಿಷಬ್ ಶೆಟ್ಟಿ ಮಾತನಾಡಿ, ಗರುಡ ಗಮನ, ವೃಷಭ ವಾಹನ ಚಿತ್ರವು ನಿರೀಕ್ಷೆಗೂ ಮೀರಿ ಯಶಸ್ಸುಗಳಿಸಿದ್ದು, ಕರ್ನಾಟಕ ಮಾತ್ರವಲ್ಲ; ಹೊರ ರಾಜ್ಯಗಳಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಕನ್ನಡ ಸಿನಿಮಾ ಹೊರ ರಾಜ್ಯಗಳಲ್ಲಿ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿರುವುದು ಸಂತಸ ತಂದಿದೆ ಎಂದರು.

ಮಂಗಳೂರು, ಮೈಸೂರು, ಬೆಂಗಳೂರಿನಲ್ಲಿ ಎರಡನೇ ವಾರವೂ ಬಹುತೇಕ ಚಿತ್ರಮಂದಿರಗಳು ಭರ್ತಿಯಾಗಿವೆ. ವಿಭಿನ್ನ ಚಿತ್ರಗಳನ್ನು ಜನ ಸ್ವೀಕರಿಸುತ್ತಾರೆ ಎಂಬುದಕ್ಕೆ ಗರುಡ ಗಮನ, ವೃಷಭ ವಾಹನ ಚಿತ್ರ ನಿದರ್ಶನ. ಚಿತ್ರದ ರಿಮೇಕ್ ಹಾಗೂ ಡಬ್ಬಿಂಗ್ ಹಕ್ಕುಗಳಿಗೆ ಬೇಡಿಕೆ ಇದ್ದು, ವಾರದೊಳಗೆ ಚಿತ್ರತಂಡ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ADVERTISEMENT

ನಾಯಕ ನಟ ಹಾಗೂ ನಿರ್ದೇಶಕ ರಾಜ್‌ ಶೆಟ್ಟಿ ಮಾತನಾಡಿ, ಎಲ್ಲ ಚಿತ್ರಗಳಿಗೆ ಇದ್ದಂತೆ ಜಿಜಿ ವಿವಿ ಚಿತ್ರಕ್ಕೂ ಪೈರಸಿ ಕಾಟ ಇದೆ. ಸಿನಿಮಾವನ್ನು ಪ್ರೀತಿಸುವವರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಾರೆ ಎಂದು ಚಿತ್ರ ತಂಡ ನಂಬಿದೆ. ಪೈರಸಿ ತಡೆಗೆ ಆ್ಯಂಟಿ ಪೈರಸಿ ಸಂಸ್ಥೆಯೊಂದರ ಜತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪೈರಸಿ ಮಾಡಿದವರ ವಿರುದ್ಧ ಸೈಬರ್ ಠಾಣೆಗೆ ದೂರು ನೀಡಲಾಗಿದೆ ಎಂದರು.

ಹಿರೋಯಿನ್‌ ಇಲ್ಲದೆ, ಪಂಚ್‌ ಡೈಲಾಗ್ ಇಲ್ಲದೆ, ಮಂಗಳೂರಿನಂತಹ ಚಿಕ್ಕ ನಗರದಲ್ಲಿ ಮಾಡಿದ ಗ್ಯಾಂಗ್‌ಸ್ಟರ್ ಚಿತ್ರ ಜನರಿಗೆ ಇಷ್ಟವಾಗಿದೆ. ಶಾಂತ ಹಾಗೂ ರೌದ್ರತೆಯ ಎರಡು ವಿಭಿನ್ನ ಪಾತ್ರಗಳನ್ನು ಸಮ್ಮಿಳಿತಗೊಳಿಸಿ ಚಿತ್ರ ನಿರ್ಮಾಣ ಮಾಡಲಾಗಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಪ್ರೇಕ್ಷಕರು ಸಿನಿಮಾವನ್ನು ಒಪ್ಪಿಕೊಂಡಿರುವುದು ಖುಷಿ ತಂದಿದೆ ಎಂದರು.

ಸಿನಿಮಾದ ನಿರ್ಮಾಪಕರಾದ ರವಿರಾಯ್ ಕಳಸ, ವಚನ್ ಶೆಟ್ಟಿ, ಶ್ರೀಕಾಂತ್‌, ವಿಕಾಸ್‌, ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್, ಕೆಮರಾಮನ್ ಪ್ರವೀಣ್ ಶ್ರೀಯಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.