ದಾಂಡೇಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದಕ್ಕೂ ಸ್ಪರ್ಧೆ. ಇಂತಹ ಸ್ಪರ್ಧೆ ಗೆಲ್ಲಲು ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಾಧ್ಯ. ಬಡತನ ತುಂಬಾ ಕೆಟ್ಟದ್ದು, ಆದರೆ, ಅದನ್ನೆ ಮೆಟ್ಟಿ ನಿಂತಾಗ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯಲು ಗುರಿ ಇಟ್ಟುಕೊಂಡು ಬೆನ್ನು ಹತ್ತಬೇಕು ಎಂದ ಶಾಸಕ ಆರ್ ವಿ ದೇಶಪಾಂಡೆ ಹೇಳಿದರು.
ಅಂಬೇವಾಡಿಯ ವಿದ್ಯಾರ್ಥಿನಿಯರ ವಸತಿ ನಿಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಜಿಲ್ಲಾ ಪಂಚಾಯಿತಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮೆಟ್ರಿಕ್ ನಂತರ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಶುಕ್ರವಾರ ನೆರವೇರಿಸಿ ಮಾತನಾಡಿದರು.
₹5 ಕೋಟಿ ರೂಪಾಯಿ ವೆಚ್ಚದಲ್ಲಿ 125 ವಿದ್ಯಾರ್ಥಿನಿಯರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಕಟ್ಟಡವನ್ನು ನಿರ್ಮಾನ ಮಾಡಲಾಗುತ್ತಿದೆ. ತಾಲ್ಲೂಕಿಗೆ ಅತೀ ಹೆಚ್ಚು ಯೋಜನೆಗಳನ್ನು ತಂದಿದ್ದೇನೆ. ಇಂತಹ ಕಟ್ಟಡ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಮಕ್ಕಳಿಗಾಗಿ ಸುಸಜ್ಜಿತ ಕಟ್ಟಡದ ವ್ಯವಸ್ಥೆಯನ್ನು ಸರಕಾರ ಒದಗಿಸಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ದಿ.ದೇವರಾಜ ಅರಸು ಅವರ ಪುಣ್ಯ ಸ್ಮರಣೆಯ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅರಸು ಅವರ ರಾಜಕೀಯ ಚಿಂತನೆಗಳು ಹಾಗೂ ಜನಪರ ಯೋಜನೆಗಳ ಕುರಿತು ಸ್ಮರಿಸಿದರು.
ತಹಶಿಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಸಿ.ಹಾದಿಮನಿ, ನಗರಸಭೆ ಅಧ್ಯಕ್ಷ ಆಶ್ಫಾಕ್ ಶೇಖ, ನಗರಸಭೆ ಸದಸ್ಯರಾದ ಮೋಹನ ಹಲವಾಯಿ, ಅನಿಲ ನಾಯ್ಕ, ಸಂಜಯ ನಂದ್ಯಾಳಕರ, ಕರ್ನಾಟಕ ಗ್ರಹ ಮಂಡಳಿ ಅಭಿಯಂತರೆ ಜ್ಯೋತಿ ನಾಜರೆ, ಹಳಿಯಾಳದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸುಜಾತಾ ಕಡತರೆ, ಕಾರವಾರದ ಹಿಂದುಳಿದ ವರ್ಗಗಳ ಕಲ್ಯಾಣ ಜಿಲ್ಲಾಧಿಕಾರಿ ಜಿ.ಸತೀಶ , ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ರಿಯಾಜ್ ಸಯ್ಯದ್, ಮಹಿಳಾ ನಿಲಯ ಮೇಲ್ವಿಚಾರಕಿ ಭಾಗೀರಥಿ ಹಾಗೂ ವಿದ್ಯಾರ್ಥಿನಿಯರು ಇದ್ದರು.
ಹಳಿಯಾಳದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುಜಾತಾ ಕಡತರೆ ಸ್ವಾಗತಿಸಿದರು. ನಿಲಯ ಮೇಲ್ವಿಚಾರಕ ಚಿದಾನಂದ ಚಿಕ್ಕೊಪ್ಪ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.