ADVERTISEMENT

ಕಾಫಿ ಸ್ಟಿಕ್‍ನಲ್ಲಿ ಕಲಾಕೃತಿಯ ಸೊಬಗು

ಐತಿಹಾಸಿಕ ಸ್ಮಾರಕಗಳ ತದ್ರೂಪು ಸೃಷ್ಟಿಸುವ ಹವ್ಯಾಸಿ ಕಲಾವಿದ

ಗಣಪತಿ ಹೆಗಡೆ
Published 15 ಏಪ್ರಿಲ್ 2023, 19:30 IST
Last Updated 15 ಏಪ್ರಿಲ್ 2023, 19:30 IST
ಕಲಾವಿದ ಪ್ರಶಾಂತ ಗಡಕರ ಕಾಫಿ ಸ್ಟಿಕ್ ಬಳಸಿ ರಚಿಸಿರುವ ಕಲಾಕೃತಿಗಳು
ಕಲಾವಿದ ಪ್ರಶಾಂತ ಗಡಕರ ಕಾಫಿ ಸ್ಟಿಕ್ ಬಳಸಿ ರಚಿಸಿರುವ ಕಲಾಕೃತಿಗಳು   

ಕಾರವಾರ: ಹೋಟೆಲ್, ರೆಸ್ಟೊರೆಂಟ್‍ಗಳಲ್ಲಿ ಕಾಫಿ, ಚಹಾಗೆ ಸಕ್ಕರೆ ಬೆರೆಸಿಕೊಂಡು ಕುಲುಕಲು ನೀಡುವ ಕಡ್ಡಿಗಳನ್ನೇ ಬಳಸಿ ಜಗದ್ವಿಖ್ಯಾತ ತಾಣಗಳ ತದ್ರೂಪು ಕಲಾಕೃತಿ ಸೃಷ್ಟಿಸುವ ಹವ್ಯಾಸಿ ಕಲಾವಿದರೊಬ್ಬರು ನಗರದಲ್ಲಿದ್ದಾರೆ.

ಇಲ್ಲಿನ ಸೋನಾರವಾಡಾ ನಿವಾಸಿ ಪ್ರಶಾಂತ ಗಡಕರ್ ಅವರು ಕಾಫಿ ಸ್ಟಿಕ್ (ಬಿದಿರಿನ ಕಡ್ಡಿ) ಬಳಕೆ ಮಾಡಿ ಐಫೆಲ್ ಟವರ್, ಹಂಪಿಯ ಏಕಶಿಲಾ ರಥ, ಕೇದಾರನಾಥ ಮಂದಿರ ಹೀಗೆ ಜಗದ್ವಿಖ್ಯಾತ ಸ್ಮಾರಕಗಳನ್ನು ಹೋಲುವ ಕಲಾಕೃತಿಗಳನ್ನು ಸಿದ್ಧಪಡಿಸಿದ್ದಾರೆ. ಖಾಸಗಿ ಉದ್ಯಮವೊಂದನ್ನು ನಡೆಸುವ ಅವರು ಬಿಡುವಿನ ವೇಳೆಯಲ್ಲಿ ಕಲಾಕೃತಿಗಳನ್ನು ರಚಿಸುತ್ತಾರೆ.

ಅವರ ಮನೆಗೆ ಕಾಲಿಟ್ಟರೆ ಬಿದಿರಿನ ಕಡ್ಡಿಗಳ ರಾಶಿ ಕಾಣಸಿಗುತ್ತದೆ. ಜತೆಗೆ ಅವುಗಳಿಂದ ತಯಾರಾದ ಬಗೆ ಬಗೆಯ ಕಲಾಕೃತಿಗಳೂ ಮನಸೆಳೆಯುತ್ತವೆ. ಅಮೃತಸರದ ಸ್ವರ್ಣ ಮಂದಿರ, ಮುಂಬೈನ ಗೇಟ್ ವೇ ಆಫ್ ಇಂಡಿಯಾ, ಅಯೋಧ್ಯೆಯ ರಾಮಮಂದಿರ, ಆಗ್ರಾದ ತಾಜ್‍ಮಹಲ್ ಹೀಗೆ ವಿಖ್ಯಾತ ತಾಣಗಳ ಮಾದರಿಯನ್ನೇ ಅವರು ಸಿದ್ಧಪಡಿಸುವುದು ಹೆಚ್ಚು.

ADVERTISEMENT

‘ಬೆಂಕಿ ಕಡ್ಡಿಗಳನ್ನು ಬಳಸಿ ತಾಜ್‍ಮಹಲ್ ಕಲಾಕೃತಿಯನ್ನು ತಯಾರಿಸುವ ಪ್ರಯತ್ನವನ್ನು ಆರಂಭದಲ್ಲಿ ಕೈಗೊಂಡಿದ್ದೆ. ಹಲವು ಪ್ರಯತ್ನಗಳ ಬಳಿಕ ಯಶವನ್ನೂ ಕಂಡುಕೊಂಡೆ. ಬಳಿಕ ಕಾಫಿ ಸ್ಟಿಕ್ ಬಳಕೆ ಮಾಡಿ ಕಲಾಕೃತಿ ರಚಿಸುವ ಯೋಚನೆ ಹೊಳೆಯಿತು. ಯೋಚನೆ ಬಂದ ಕ್ಷಣದಿಂದಲೇ ಕೆಲವು ಕಲಾಕೃತಿಗಳನ್ನು ರಚಿಸುವ ಯೋಜನೆ ಹಾಕಿಕೊಂಡೆ’ ಎಂದು ಹವ್ಯಾಸ ರೂಢಿಯಾದ ಬಗೆ ವಿವರಿಸುತ್ತಾರೆ ಪ್ರಶಾಂತ್.

‘ಆನ್‍ಲೈನ್ ಮೂಲಕ ಕಡ್ಡಿಗಳನ್ನು ತರಿಸಿಕೊಳ್ಳುತ್ತೇನೆ. ಫ್ಲೆಕ್ಸ್ ಗಮ್, ಫೋಮ್ ಬಳಕೆ ಮಾಡಿ ಕಲಾಕೃತಿಗಳನ್ನು ತಯಾರಿಸುತ್ತೇನೆ. ಇವುಗಳ ಹೊರತಾಗಿ ಬೇರೆ ಯಾವ ಸಾಮಗ್ರಿಯನ್ನೂ ಬಳಸುವುದಿಲ್ಲ’ ಎಂದರು.

‘ಸಿದ್ಧಪಡಿಸಬೇಕಾದ ಕಲಾಕೃತಿಗಳ ಭಾವಚಿತ್ರಗಳನ್ನು ಹಲವು ಬಾರಿ ಸೂಕ್ಷ್ಮವಾಗಿ ಗಮನಿಸುತ್ತೇನೆ. ಅವುಗಳ ಚಿತ್ರಣ ಮನಸ್ಸಿನಲ್ಲಿ ಮುದ್ರಿಸಿಕೊಂಡು ನಂತರ ಕೆಲಸ ಆರಂಭಿಸುತ್ತೇನೆ. ಒಂದೊಂದು ಕಲಾಕೃತಿ ರಚನೆಗೂ ಕನಿಷ್ಠ ಒಂದರಿಂದ ಒಂದೂವರೆ ತಿಂಗಳು ಕಾಲಾವಕಾಶ ತಗಲುತ್ತದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.