
ಪೊಲೀಸ್
ಸಾಂದರ್ಭಿಕ ಚಿತ್ರ
ಭಟ್ಕಳ: ನ್ಯಾಯಾಲಯದ ವಾರೆಂಟ್ ಜಾರಿ ಮಾಡಲು ಹೋಗಿದ್ದ ಕೋರ್ಟ್ ಬೇಲಿಫ್ (ಕಾನೂನು ಪತ್ರ ಜಾರಿ ಅಧಿಕಾರಿ) ಒಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ದೂಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ಇರ್ಫಾನ್ ಅಬುಬಕರ್ ಹಾಜಿಅಮೀನ್ ಎಂಬಾತನ ಮೇಲೆ ಮಂಗಳವಾರ ದೂರು ದಾಖಲಾಗಿದೆ.
ನ್ಯಾಯಾಲಯದಲ್ಲಿ ಬೇಲಿಫ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗಣಪತಿ ತಂದೆ ಹನುಮಂತ ನಾಯ್ಕ ಇವರು ಆಪಾದಿತ ಮೊಹಮ್ಮದ್ ಇರ್ಫಾನ್ ಅಬುಬಕರ್ ಹಾಜಿಅಮಿನ್ ಇವರಿಗೆ ಭಟ್ಕಳದ ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಹೊರಡಿಸಲಾಗಿದ್ದ ದಸ್ತಗಿರ್ ವಾರಂಟ್ ಜ್ಯಾರಿ ಮಾಡಲು ಹೋದಾಗ ಈ ಕೃತ್ಯ ಎಸಗಿದ್ದು ಅವರೊಂದಿಗೆ ಅವರ ಸಹೋದರ ಸುಫಿಯಾನ್ ಕೂಡಾ ಭಾಗಿಯಾಗಿದ್ದರು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ತನ್ನೊಂದಿಗೆ ಇದ್ದ ಭಟ್ಕಳ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಸಿಬ್ಬಂದಿ ರೋಹಿತ್ ತಂದೆ ದತ್ತಾತ್ರೇಯ ಶೆಟ್ಟ ಹಾಗೂ ಗಣೇಶ ಹನುಮಂತ ನಾಯ್ಕ ಅವರಿಗೂ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿದ್ದಾರೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.