
ಕಾರವಾರ: ಮೈಮೇಲೆ ಎಲೆಕ್ಟ್ರಾನಿಕ್ ಉಪಕರಣ ಹೊತ್ತ ಕಡಲಹಕ್ಕಿ ಇಲ್ಲಿನ ಟ್ಯಾಗೋರ್ ಕಡಲತೀರದ ಬಳಿ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿತ್ತು. ಆದರೆ, ಅದರ ಹಾರಾಟದ ಕಥನವನ್ನು ಪಕ್ಷಿ ಚಲನವಲನ ಸಂಶೋಧನೆಗೆ ಬಳಸಿದ ಶ್ರೀಲಂಕಾದ ವನ್ಯಜೀವಿ ಸಂರಕ್ಷಣಾ ಸಂಸ್ಥೆ (ಎಸ್‌ಡಬ್ಲ್ಯೂಸಿಎಸ್) ತೆರೆದಿಟ್ಟಿದೆ.
‘ಉಪಗ್ರಹ ಟ್ಯಾಗಿಂಗ್ ಮತ್ತು ಜಿಪಿಎಸ್ ಟ್ರಾನ್ಸ್‌ಮೀಟರ್ ಒಳಗೊಂಡಿದ್ದ ಹ್ಯೂಗ್ಲಿನ್ಸ್ ಸೀಗಲ್ (ಹ್ಯೂಗ್ಲಿನ್ಸ್ ಕಡಲಹಕ್ಕಿ) ಜಾತಿಗೆ ಸೇರಿದ ಹಕ್ಕಿಯು ಶ್ರೀಲಂಕಾದ ಸಂಸ್ಥೆಯು ಚಲನವಲನದ ಅಧ್ಯಯನಕ್ಕೆ ಬಳಸಿಕೊಂಡ ಪಕ್ಷಿ’ ಎಂದು ಇಲ್ಲಿನ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗ ಖಚಿತಪಡಿಸಿದೆ.
‘ಮಂಜು ಹೆಪ್ಪುಗಟ್ಟಿದ ಪ್ರದೇಶದಲ್ಲಿ ಜನಿಸಿದ ಹ್ಯೂಗ್ಲಿನ್ ಸೀ ಗಲ್ ಚಳಿಗಾಲದಲ್ಲಿ ಉಷ್ಣವಲಯದ ಶ್ರೀಲಂಕಾಕ್ಕೆ ವಲಸೆ ಬರುತ್ತದೆ. ಹೀಗೆ ಬಂದ ಪಕ್ಷಿಯನ್ನು ಸಂಶೋಧನೆಗೆ ಬಳಸಲು ಸೆರೆ ಹಿಡಿದು, ಮಾರ್ಚ್‌ನಲ್ಲಿ ಉಪಗ್ರಹ ಟ್ಯಾಗಿಂಗ್ ಪರಿಕರ ಅಳವಡಿಸಲಾಗಿತ್ತು. ಆ ಬಳಿಕ ಸೈಬೀರಿಯಾದತ್ತ ಪ್ರಯಾಣಿಸಿದ್ದ ಪಕ್ಷಿಯು ಆರ್ಕ್ಟಿಕ್‌ನ ಅಂಚಿನವೆರೆಗೆ ಸಾಗಿತು. ಅಲ್ಲಿಯೇ ಸಂತಾನೋತ್ಪತ್ತಿ ಚಟುವಟಿಕೆ ಬಳಿಕ ಪುನಃ ಶ್ರೀಲಂಕಾದತ್ತ ಪ್ರಯಾಣಿಸಿತ್ತು. ಹೀಗೆ ಸಾಗುವ ಮಾರ್ಗ ಮಧ್ಯೆ ಕಾರವಾರದ ಬಳಿ ಪಕ್ಷಿಯ ಹಾರಾಟ ಸ್ಥಗಿತಗೊಂಡಿತ್ತು’ ಎಂದು ಕೊಲಂಬೊ ವಿಶ್ವವಿದ್ಯಾಲಯದ ಸಂಶೋಧನಾ ವಿಜ್ಞಾನಿ ಸಂಪತ್ ಸೆನೆವಿರತ್ನೆ ಹೇಳಿದರು.
‘ಹ್ಯೂಗ್ಲಿನ್ಸ್ ಈ ಅವಧಿಯಲ್ಲಿ 12 ಸಾವಿರ ಕಿ.ಮೀ.ಗಿಂತ ದೂರ ಕ್ರಮಿಸಿದೆ. ಅದರ ಉಪಗ್ರಹ ದತ್ತಾಂಶ ಗಮನಿಸಿದರೆ ರಾತ್ರಿಯೂ ಈ ಜಾತಿಯ ಪಕ್ಷಿಗಳು ಹಾರುತ್ತಲೇ ಇರುತ್ತವೆ ಎಂಬುದು ಖಚಿತವಾಗಿದೆ’ ಎಂದರು.
‘ಶ್ರೀಲಂಕಾದ ವನ್ಯಜೀವಿ ಸಂಸ್ಥೆಯು ಕಡಲಹಕ್ಕಿಗಳ ಸಂಶೋಧನೆಗೆ ಕೈಗೊಂಡಿರುವ ಶ್ರಮ ಕಾರವಾರದಲ್ಲಿ ಪತ್ತೆಯಾದ ಪಕ್ಷಿಯಿಂದ ಗೊತ್ತಾಗಿದೆ. ಇಂತಹ ಪ್ರಯತ್ನವನ್ನು ಭಾರತದಲ್ಲೂ ನಡೆಸಬೇಕು. ಸ್ವದೇಶಿ ಸುಧಾರಿತ ಯಂತ್ರಗಳನ್ನು ನಿರ್ಮಿಸಿ ಇಂತಹ ಸಂಶೋಧನೆ ನಡೆಸಲು ಈ ಘಟನೆ ಪಾಠವಾಗಬೇಕು’ ಎಂದು ವನ್ಯಜೀವಿ ಕ್ಷೇತ್ರದ ಹಿರಿಯ ಸಂಶೋಧಕ ಅಮಿತ ಹೆಗಡೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಅಸ್ವಸ್ಥ ಸ್ಥಿತಿಯಲ್ಲಿದ್ದ ಕಾರಣಕ್ಕೆ ಶ್ರೀಲಂಕಾದ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಮನವಿ ಮೇರೆಗೆ ಹ್ಯೂಗ್ಲಿನ್ಸ್ ಸೀ ಗಲ್‌ನ ದೇಹದ ಮೇಲೆ ಅಳವಡಿಸಿದ್ದ ಜಿಪಿಎಸ್ ಟ್ರಾನ್ಸ್‌ಮೀಟರ್‌ನ್ನು ಪಶುವೈದ್ಯರು ತೆರೆವುಗೊಳಿಸಿದ್ದಾರೆಕಿರಣ್ ಮನವಾಚಾರಿ ಕೋಸ್ಟಲ್ ಮರೈನ್ ವಿಭಾಗದ ಆರ್‌ಎಫ್‌ಒ
ಚೀನಿ ಹೆಸರು ತಂದ ಆತಂಕ
‘ಹ್ಯೂಗ್ಲಿನ್ಸ್ ಸೀ ಗಲ್’ ಪಕ್ಷಿ ದೇಹದ ಮೇಲಿದ್ದ ಜಿಪಿಎಸ್ ಟ್ರಾನ್ಸ್‌ಮೀಟರ್ ಮೇಲೆ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ ಹೆಸರು ನಮೂದಾಗಿತ್ತು. ಇದರಿಂದ ಇದು ನೌಕಾನೆಲೆಯ ಗೂಢಚರ್ಯೆಗೆ ಚೀನಾ ಬಳಸಿದ್ದ ಪಕ್ಷಿ ಆಗಿರಬಹುದೇ ಅನುಮಾನ ಉಂಟಾಗಿತ್ತು. ಈ ಬಗ್ಗೆ ಪೊಲೀಸರು ನೌಕಾಪಡೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ‘ಶ್ರೀಲಂಕಾದ ವನ್ಯಜೀವಿ ಸಂರಕ್ಷಣಾ ಸಂಸ್ಥೆ ಸೇರಿ ಹಲವರ ವಿಚಾರಣೆ ನಡೆಸಿದ್ದು ಪ್ರಾಥಮಿಕ ತನಿಖೆ ವೇಳೆ ಇದು ಶ್ರೀಲಂಕಾದ ಸಂಸ್ಥೆ ಪಕ್ಷಿ ಅಧ್ಯಯನಕ್ಕೆ ಚೀನಿ ಅಕಾಡೆಮಿ ನೆರವು ಪಡೆದಿರುವುದು ಗೊತ್ತಾಗಿದೆ. ಇನ್ನಷ್ಟು ಪರಿಶೀಲಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.