ADVERTISEMENT

ಶಾಸಕರ ಆಯ್ಕೆ: ನ್ಯಾಯಾಲಯ ತೀರ್ಪು ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 5:21 IST
Last Updated 27 ಸೆಪ್ಟೆಂಬರ್ 2025, 5:21 IST
ಕುಮಟಾ-ಹೊನ್ನಾವರ ವಿಧಾನಸಭೆ 2023ರ ಚುನಾವಣೆಯಲ್ಲಿ ಶಾಸಕ ದಿನಕರ ಶೆಟ್ಟಿ ಅವರ ಆಯ್ಕೆಯನ್ನು ಎತ್ತಿ ಹಿಡಿದ ನ್ಯಾಯಾಲಯದ ತೀರ್ಪಿನ ನಂತರ ಪಟ್ಟಣದ ಗಿಬ್ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಶಾಸಕರೊಂದಿಗೆ ಸಂಭ್ರಮಾಚರಿಸಿದರು
ಕುಮಟಾ-ಹೊನ್ನಾವರ ವಿಧಾನಸಭೆ 2023ರ ಚುನಾವಣೆಯಲ್ಲಿ ಶಾಸಕ ದಿನಕರ ಶೆಟ್ಟಿ ಅವರ ಆಯ್ಕೆಯನ್ನು ಎತ್ತಿ ಹಿಡಿದ ನ್ಯಾಯಾಲಯದ ತೀರ್ಪಿನ ನಂತರ ಪಟ್ಟಣದ ಗಿಬ್ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಶಾಸಕರೊಂದಿಗೆ ಸಂಭ್ರಮಾಚರಿಸಿದರು   

ಕುಮಟಾ: ‘ಕುಮಟಾ-ಹೊನ್ನಾವರ ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸೋತ ಜೆಡಿ (ಎಸ್) ಅಭ್ಯರ್ಥಿ ಸೂರಜ್ ನಾಯ್ಕ ಉಚ್ಛ ನ್ಯಾಯಾಲಯ ಮೊರೆ ಹೋಗಿದ್ದ ಪ್ರಕರಣದಲ್ಲಿ ನನ್ನ ಆಯ್ಕೆಯನ್ನು ಎತ್ತಿಹಿಡಿದ ನ್ಯಾಯಾಲಯದ ತೀರ್ಪು ಜನರ ಮನಸ್ಸಿನಲ್ಲಿದ್ದ ಗೊಂದಲಕ್ಕೆ ತೆರೆ ಎಳೆದಿದೆ‘ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ತೀರ್ಪು ಬಂದ ಹಿನ್ನೆಲೆಯಲ್ಲಿ ಪಟ್ಟಣದ ಗಿಬ್ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಚುನಾವಣೆಯ ಮತ ಎಣಿಕೆ ನಡೆದು ನಾನು 673 ಮತಗಳ ಅಂತರದಿಂದ ಆಯ್ಕೆಗೊಂಡಾಗ ಮತ ಎಣಿಕೆಯಲ್ಲಿ ಅನ್ಯಾಯವಾಗಿದೆ ಎಂದು ಸೋತ ಜೆಡಿ(ಎಸ್) ಅಭ್ಯರ್ಥಿ ಸೂರಜ ನಾಯ್ಕ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ನಡುವೆ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮತ ಎಣಿಕೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಹೇಳಿಕೊಳ್ಳುತ್ತಿದ್ದರು’ ಎಂದರು.

`ಸುಮಾರು ಒಂದೂವರೆ ವರ್ಷಗಳ ಕಾಲ ವಿಚಾರಣೆಯ ನಂತರ ನನ್ನ ಗೆಲುವನ್ನು ಸಮರ್ಥಿಸಿ ಉಚ್ಛ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ಈ ತೀರ್ಪು ಸಾರ್ವಜನಿಕ ಜೀವನದಲ್ಲಿರುವ ನನ್ನ ಆಯ್ಕೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ’ ಎಂದು ತಿಳಿಸಿದರು.

ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ಜಿ.ಐ.ಹೆಗಡೆ, ಮುಖಂಡರಾದ ಕುಮಾರ ಮಾರ್ಕಾಂಡೆ, ಜಿ.ಎಸ್. ಗುನಗ, ರಾಮು ಕೆಂಚನ್, ತಿಮ್ಮಪ್ಪ ಮುಕ್ರಿ, ಗಜಾನನ ಪೈ, ರಾಜೇಶ ನಾಯಕ, ವಿ.ಐ. ಹೆಗಡೆ, ವೆಂಕಟೇಶ ನಾಯ್ಕ, ಮಹೇಶ ಶೆಟ್ಟಿ, ಜಯಾ ಶೇಟ್ ಪಾಲ್ಗೊಂಡಿದ್ದರು.

ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.