ಸತೀಶ್ ಸೈಲ್
ಕಾರವಾರ: ಶಾಸಕ ಸತೀಶ ಸೈಲ್ ಮನೆ ಮೇಲೆ ಎರಡು ದಿನಗಳ ಹಿಂದೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೋಟ್ಯಂತರ ನಗದು, ಕೆಜಿಗಟ್ಟಲೆ ಬಂಗಾರ ವಶಕ್ಕೆ ಪಡೆದಿದ್ದಾರೆ.
'ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ಕಳ್ಳ ಸಾಗಾಣಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಹಣಕಾಸು ವಹಿವಾಟು ಮಾಹಿತಿ ಆಧರಿಸಿ ಕಾರವಾರ ಶಾಸಕ ಸತೀಶ ಸೈಲ್ ಅವರ ನಿವಾಸ, ಈ ಪ್ರಕರಣದಲ್ಲಿ ಭಾಗಿಯಾದ ಇನ್ನಿತರರ ಕಚೇರಿ ನಿವಾಸಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು.
ಕಾರವಾರ, ದೆಹಲಿ, ಗೋವಾ, ಮುಂಬೈನ ವಿವಿಧೆಡೆ ಪರಿಶೀಲನೆಯನ್ನು ಇ.ಡಿಯ ಬೆಂಗಳೂರು ವಿಭಾಗದ ತಂಡ ಕೈಗೊಂಡಿತ್ತು' ಎಂದು ಜಾರಿ ನಿರ್ದೇಶನಾಲಯ ತನ್ನ 'ಎಕ್ಸ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
'ಪರಿಶೀಲನೆ ನಡೆಸಿದ ವೇಳೆ ₹1.68 ಕೋಟಿ ನಗದು, 6.75 ಕೆ.ಜಿ ತೂಕದಷ್ಟು ಬಂಗಾರದ ಆಭರಣ ಹಾಗೂ ಚಿನ್ನದ ಬಿಸ್ಕತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಭಾಗಿಯಾದವರ ಬ್ಯಾಂಕ್ ಖಾತೆಯಲ್ಲಿ ಅಂದಾಜು ₹14.13 ಕೋಟಿ ಮೊತ್ತವನ್ನು ತಡೆಹಿಡಿಯಲಾಗಿದೆ' ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.