ADVERTISEMENT

ಕಾರವಾರ | ಗೇಣಿ ಜಮೀನಿನಲ್ಲಿ ಕೃಷಿ: ಚಿಕನ್ ವ್ಯಾಪಾರಿಯ ಕೈಹಿಡಿದ ಕಲ್ಲಂಗಡಿ

ಐದು ಬಾರಿ ಫಸಲು ಪಡೆಯುವ ವಿನಯ ನಾಯ್ಕ

ಗಣಪತಿ ಹೆಗಡೆ
Published 20 ಡಿಸೆಂಬರ್ 2024, 6:07 IST
Last Updated 20 ಡಿಸೆಂಬರ್ 2024, 6:07 IST
ಕಾರವಾರ ತಾಲ್ಲೂಕಿನ ಹಣಕೋಣ ಗ್ರಾಮದಲ್ಲಿರುವ ಗದ್ದೆಯಲ್ಲಿ ಕಲ್ಲಂಗಡಿ ಕಾಯಿ ಪರಿಶೀಲಿಸುತ್ತಿರುವ ಕೃಷಿಕ ವಿನಯ ವಿಠ್ಠಲ ನಾಯ್ಕ
ಕಾರವಾರ ತಾಲ್ಲೂಕಿನ ಹಣಕೋಣ ಗ್ರಾಮದಲ್ಲಿರುವ ಗದ್ದೆಯಲ್ಲಿ ಕಲ್ಲಂಗಡಿ ಕಾಯಿ ಪರಿಶೀಲಿಸುತ್ತಿರುವ ಕೃಷಿಕ ವಿನಯ ವಿಠ್ಠಲ ನಾಯ್ಕ   

ಕಾರವಾರ: ‘ಭತ್ತದ ಹೊರತಾಗಿ ಹೊಸ ಬೆಳೆ ಬೆಳೆಯುವ ಯೋಚನೆ ಗ್ರಾಮದಲ್ಲಿ ಯಾರಿಗೂ ಇರಲಿಲ್ಲ. ಸಾಂಪ್ರದಾಯಿಕ ಕೃಷಿಯನ್ನೇ ಮುಂದುವರೆಸಿಕೊಂಡಿದ್ದ ನೆಲದಲ್ಲಿ ಎಂಟು ವರ್ಷಗಳ ಹಿಂದೆ ಕಲ್ಲಂಗಡಿ ಬೆಳೆಯುವ ಸಾಹಸಕ್ಕೆ ಕೈಹಾಕಿದೆ. ಕಲ್ಲಂಗಡಿ ಬೆಳೆ ನನ್ನ ಕೈ ಹಿಡಿಯಿತು.’

ಹೀಗೆಂದು ತಾಲ್ಲೂಕಿನ ಹಣಕೋಣ ಗ್ರಾಮದಲ್ಲಿನ ಜಲಾಶಯದ ಪಕ್ಕದಲ್ಲಿರುವ ವಿಶಾಲವಾದ ಗದ್ದೆಯಲ್ಲಿ ಕಲ್ಲಂಗಡಿ ಬಳ್ಳಿಗೆ ನೀರುಣಿಸುತ್ತ ಮಾತಿಗಿಳಿದವರು ವಿನಯ ವಿಠ್ಠಲ ನಾಯ್ಕ. ಬೇರೆಯವರಿಗೆ ಸೇರಿದ ಸುಮಾರು ಒಂದೂವರೆ ಎಕರೆಯಷ್ಟು ಜಮೀನಿನಲ್ಲಿ ಅವರು ಕಲ್ಲಂಗಡಿ ಬೆಳೆಯುತ್ತಿದ್ದಾರೆ.

ರಾಸಾಯನಿಕ ಬಳಸದೆ, ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಕೋಳಿಮಾಂಸದ ಅಂಗಡಿ ನಡೆಸುವ ಅವರು ವ್ಯಾಪಾರದೊಂದಿಗೆ ಕೃಷಿ ಚಟುವಟಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ADVERTISEMENT

‘ಸ್ವಂತ ಜಮೀನು ಇರಲಿಲ್ಲ. ಆದರೆ, ಕೃಷಿ ಮಾಡುವ ಬಯಕೆ ಇತ್ತು. ಪರಿಚಯದವರಿಂದ ಭೂಮಿಯನ್ನು ಗೇಣಿಗೆ ಪಡೆದು ಎಂಟು ವರ್ಷಗಳ ಹಿಂದೆ ಕಲ್ಲಂಗಡಿ ಕೃಷಿ ಆರಂಭಿಸಿದೆ. ಒಂದು ಕಡೆ ಒಂದೂವರೆ ಎಕರೆ, ಇನ್ನೊಂದು ಕಡೆ ಆರು ಎಕರೆ ಪ್ರದೇಶದಲ್ಲಿ ಕಲ್ಲಂಗಡಿಯನ್ನು ಪ್ರತ್ಯೇಕ ಅವಧಿಯಲ್ಲಿ ಬೆಳೆಯುತ್ತಿದ್ದೇನೆ’ ಎಂದು ವಿನಯ ತಿಳಿಸಿದರು.

‘ಕಲ್ಲಂಗಡಿ ಬೆಳೆಯುತ್ತಿರುವ ಜಾಗದಲ್ಲಿ ಮೊದಲು ಭತ್ತವನ್ನಷ್ಟೇ ಬೆಳೆಯಲಾಗುತ್ತಿತ್ತು. ಎಂಟು ವರ್ಷಗಳ ಹಿಂದೆ ಕಲ್ಲಂಗಡಿ ಬೆಳೆಗೆ ಈ ಪ್ರದೇಶದಲ್ಲಿ ಬೇಡಿಕೆ ಇರಲಿಲ್ಲ. ಸೀಮಿತ ಸಂಖ್ಯೆಯ ರೈತರು ಮಾತ್ರ ಬೆಳೆ ತೆಗೆಯುತ್ತಿದ್ದರು. ಗ್ರಾಮದಲ್ಲಿ ಮೊದಲ ಬಾರಿಗೆ ಕಲ್ಲಂಗಡಿ ಪರಿಚಯಿಸುವ ಕೆಲಸ ಮಾಡಿದೆ’ ಎಂದು ಹೇಳಿದರು.

‘ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಅವಧಿಯ ಕಲ್ಲಂಗಡಿ ಬಿತ್ತನೆ ಮಾಡಲಾಗುತ್ತದೆ. ಫೆಬ್ರವರಿವರೆಗೆ ಮೂರು ಬಾರಿ ಫಸಲು ಕೈಗೆ ಸಿಗುತ್ತದೆ. ಜನವರಿಯಲ್ಲಿ ಆರು ಎಕರೆಯಲ್ಲಿರುವ ಇನ್ನೊಂದು ಗದ್ದೆಯಲ್ಲಿ ಬಿತ್ತನೆ ನಡೆಯುತ್ತದೆ. ಮೇ ತಿಂಗಳ ಆರಂಭದವರೆಗೆ ಫಸಲು ದೊರೆಯುತ್ತದೆ. 15 ಟನ್‍ಗೂ ಹೆಚ್ಚು ಫಸಲು ಕಳೆದ ವರ್ಷ ದೊರೆತಿತ್ತು. ಎಕರೆಗೆ ಸುಮಾರು ₹80 ಸಾವಿರ ವೆಚ್ಚವಾಗುತ್ತಿದೆ. ಹವಾಮಾನದಲ್ಲಿ ಏರುಪೇರು ಕಾಣದೆ ಗುಣಮಟ್ಟದ ಕಾಯಿಗಳು ದೊರೆತರೆ ಲಾಭ ಸಿಗುತ್ತಿದೆ. ಎಂಟು ವರ್ಷಗಳಲ್ಲಿ ಕೃಷಿಯಿಂದ ಲಕ್ಷಾಂತರ ಆದಾಯ ಗಳಿಸಿದ್ದೇನೆ’ ಎಂದೂ ವಿವರಿಸಿದರು.

ಇಸ್ರೇಲಿ ಮಾದರಿ ಅನುಸರಣೆ

‘ಕಲ್ಲಂಗಡಿ ಬೆಳೆಯಲು ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) ಬಳಸಿ ಕಡಿಮೆ ನೀರಾವರಿಯಲ್ಲಿ ಬೆಳೆ ತೆಗೆಯುವ ಇಸ್ರೇಲಿ ಮಾದರಿ ಅನುಸರಿಸುತ್ತಿದ್ದೇನೆ. ನೀರಾವರಿಗೆ ತೊಂದರೆ ಇರದಿದ್ದರೂ ಕಡಿಮೆ ನೀರು ಬಳಕೆಯಿಂದ ಉತ್ತಮ ಫಸಲು ಸಿಕ್ಕಿದೆ. ಅತಿಯಾದ ಇಬ್ಬನಿ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿದ್ದೂ ಇದೆ. ಮಲ್ಚಿಂಗ್ ಅಳವಡಿಕೆಗೆ ಸ್ವಂತ ಜಮೀನಾಗಿದ್ದರೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಸಿಗುತ್ತಿತ್ತು. ಗೇಣಿ ಜಮೀನಾದ ಕಾರಣಕ್ಕೆ ಸರ್ಕಾರದ ಸೌಲಭ್ಯ ಇಲ್ಲದಿದ್ದರೂ ಸ್ವಂತ ವೆಚ್ಚದಿಂದ ಕೃಷಿ ಮಾಡುತ್ತಿದ್ದೇನೆ’ ಎನ್ನುತ್ತಾರೆ ಕೃಷಿಕ ವಿನಯ ವಿಠ್ಠಲ ನಾಯ್ಕ.

ಮಳೆಗಾಲದಲ್ಲಿ ಗ್ರಾಮದ ಹಲವು ಕೃಷಿಭೂಮಿಯಲ್ಲಿ ನೀರು ನಿಲ್ಲುವ ಸಮಸ್ಯೆ ಇದೆ. ಇಲ್ಲದಿದ್ದರೆ ಕಲ್ಲಂಗಡಿ ಕ್ಷೇತ್ರ ಇನ್ನಷ್ಟು ವಿಸ್ತರಿಸುವ ಯೋಚನೆ ಇತ್ತು
–ವಿನಯ ವಿಠ್ಠಲ ನಾಯ್ಕ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.