ADVERTISEMENT

ಕಾರವಾರ| ಅಧಿವೇಶನದಲ್ಲಿ ಅರಣ್ಯವಾಸಿ ಪರ ನಿರ್ಣಯ ಕೈಗೊಳ್ಳಿ: ರವಿಂದ್ರ ನಾಯ್ಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:06 IST
Last Updated 7 ಡಿಸೆಂಬರ್ 2025, 5:06 IST
ಕಾರವಾರದ ಮಾಲಾದೇವಿ ಮೈದಾನದಲ್ಲಿ ಶನಿವಾರ ನಡೆದ ಅರಣ್ಯ ವಾಸಿಗಳ ಕಾನೂನು ಜಾಗೃತಿ ಸಮಾವೇಶದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿದರು 
ಕಾರವಾರದ ಮಾಲಾದೇವಿ ಮೈದಾನದಲ್ಲಿ ಶನಿವಾರ ನಡೆದ ಅರಣ್ಯ ವಾಸಿಗಳ ಕಾನೂನು ಜಾಗೃತಿ ಸಮಾವೇಶದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿದರು    

ಕಾರವಾರ: ‘ವಿದ್ಯುತ್ ಉತ್ಪಾದನೆ ಯೋಜನೆಗೆ ನೂರಾರು ಎಕರೆ ಅರಣ್ಯಭೂಮಿಯನ್ನು ನಾಶಮಾಡಲು ಹಿಂದೆಮುಂದೆ ಯೋಚಿಸದ ಸರ್ಕಾರ, ಅರಣ್ಯ ಭೂಮಿ ಉಳಿಸಿಕೊಂಡೇ ಸಾಗುವಳಿ ಮಾಡುತ್ತ ಬಂದವರಿಗೆ ಹಕ್ಕುಪತ್ರ ನೀಡಲು ಮುಂದಾಗಲಿ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದರು.

ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಶನಿವಾರ ‘ಭೂಮಿ ಹಕ್ಕು ಸಂವಿಧಾನ ಬದ್ಧ ಹಕ್ಕು’ ಘೋಷವಾಕ್ಯದಡಿ ಅಂಬೇಡ್ಕರ್ ಪರಿವರ್ತನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅರಣ್ಯವಾಸಿಗಳ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಅರಣ್ಯ ಭೂಮಿ ಹಕ್ಕು ನೀಡಲು ರಾಜ್ಯ ಸರ್ಕಾರ ಅರಣ್ಯವಾಸಿಗಳ ಪರವಾದ ನಿರ್ಣಯವನ್ನು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ತೆಗೆದುಕೊಳ್ಳಲಿ’ ಎಂದರು.

ADVERTISEMENT

‘ಅರಣ್ಯ ಹಕ್ಕು ಕಾಯ್ದೆಯ ಅಡಿ ಅರ್ಜಿ ಸಲ್ಲಿಸಿದವರು ಮೂರು ತಲೆಮಾರಿನ ದಾಖಲೆ ನೀಡಬೇಕು ಎಂಬ ಷರತ್ತು ಕೈ ಬಿಡಬೇಕು. ಸಾಂದರ್ಭಿಕ ದಾಖಲೆ ಅಡಿಯಲ್ಲಿ ಅರಣ್ಯ ಭೂಮಿ ಹಕ್ಕು ನೀಡಬೇಕು. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಅರ್ಜಿ ಅಂತಿಮ ಪರಿಶೀಲನೆಗೊಳ್ಳುವವರೆಗೆ ಒಕ್ಕಲೆಬ್ಬಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಇವೆಲ್ಲ ನಿರ್ಣಯಗಳನ್ನು ಅಧಿವೇಶನದಲ್ಲಿ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘1998ರಲ್ಲಿ ಜಿಲ್ಲಾದ್ಯಂತ 35 ಸಾವಿರ ಅರಣ್ಯವಾಸಿಗಳ ಮೇಲೆ ಪ್ರಕರಣ ದಾಖಲಿಸಿದ್ದ ಸರ್ಕಾರವು, ಈಗ ಅವರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರ ಅನುಮತಿ ನೀಡಿ 19 ವರ್ಷಗಳಾದರೂ 1978ರ ಪೂರ್ವ ಅತಿಕ್ರಮಿಸಿರುವ 2,513 ಪ್ರಕರಣಕ್ಕೆ ಶೀಘ್ರ ಮಂಜೂರಿ ನೀಡಬೇಕು’ ಎಂದರು.

ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಮಂಜುನಾಥ ಮರಾಠಿ, ಶಿವಾನಂದ ಜೋಗಿ, ರಮಾನಂದ ನಾಯಕ, ಸುರೇಶ ಮೇಸ್ತ, ಸುಬ್ಬಣ್ಣ ಮಾಗೋಡ, ಮಹೇಶ ನಾಯ್ಕ ಕಾನಕ್ಕಿ, ಮಾತನಾಡಿದರು.

ಭೀಮಸಿ ವಾಲ್ಮೀಕಿ, ಜಗದೀಶ್ ಶಿರಳಗಿ, ಪಾಂಡುರಂಗ ನಾಯ್ಕ, ಚಂದ್ರ ಪೂಜಾರಿ, ದಿವಾಕರ್ ಮರಾಠಿ, ದೇವರಾಜ ಗೊಂಡ, ರಪೀಕ ಗಫಾರ, ಪ್ರಭಾಕರ ವೇಳಿಪ್, ಇತರರು ಪಾಲ್ಗೊಂಡಿದ್ದರು.

ಅದ್ದೂರಿ ಮೆರವಣಿಗೆ

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರು ಇಲ್ಲಿನ ಟ್ಯಾಗೋರ್ ಕಡಲತೀರದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಮುಖ್ಯ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಪ್ರದರ್ಶಿಸಲಾಯಿತು. ಡೊಳ್ಳು ಕುಣಿತ ಲಂಬಾಣಿ ನೃತ್ಯ ತಂಡಗಳು ಪಾಲ್ಗೊಂಡಿದ್ದವು. ಸಮಾವೇಶದ ಬಳಿಕ ಸಾವಿರಾರು ಅರಣ್ಯವಾಸಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ವೈಯಕ್ತಿಕವಾಗಿ ಅರಣ್ಯ ಹಕ್ಕು ಕಾಯ್ದೆ ಅಡಿ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕೃತಗೊಂಡಿದ್ದಕ್ಕೆ ಆಕ್ಷೇಪ ಪತ್ರ ಸಲ್ಲಿಸಿದರು.               

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.