
ಗೋಕರ್ಣದಲ್ಲಿ ಕುಮಟಾ ಉಪ ವಿಭಾಗಾಧಿಕಾರಿ ಶ್ರವಣಕುಮಾರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು
ಗೋಕರ್ಣ: ಧಾರ್ಮಿಕ ಕ್ಷೇತ್ರ ಗೋಕರ್ಣಕ್ಕೆ ದಿನದಿಂದ ದಿನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಕ್ಷೇತ್ರದ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡಲು ಸ್ಥಳೀಯ ಗ್ರಾಮ ಪಂಚಾಯಿತಿ ಜೊತೆಗೆ ಇತರ ಇಲಾಖೆಗಳೂ ಕೈಜೋಡಿಸಬೇಕು’ ಎಂದು ಕುಮಟಾ ಉಪ ವಿಭಾಗಾಧಿಕಾರಿ ಪಿ. ಶ್ರವಣಕುಮಾರ ಸೂಚಿಸಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ, ವಿವಿಧ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
‘ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಜಾಗದ ಸ್ವಚ್ಛತೆ ಮತ್ತು ನಿರ್ವಹಣೆ
ಯನ್ನು ಅರಣ್ಯ ಇಲಾಖೆಯವರೇ ನಿರ್ವಹಿ
ಸಬೇಕು. ಚಾರಣದ ಸ್ಥಳಗಲ್ಲಿನ ಸುರಕ್ಷತೆಯ ಬಗ್ಗೆ ತ್ವರಿತ ಕ್ರಮವಾಗಬೇಕು.
ಪ್ರವಾಸೋದ್ಯಮ ಇಲಾಖೆಯಿಂದ ಕಡಲತೀರದ ಸ್ವಚ್ಛತೆ ಹಾಗೂ ಪ್ರವಾಸಿ ತಾಣಕ್ಕೆ ಸಂಬಂಧಿಸಿದ ಇತರೆ ಕಾರ್ಯ ಚಟುವಟಿಕೆ ನಿಭಾಯಿಸಬೇಕು, ನಿರಂತರ ನಿಗಾ ಇಡಬೇಕು’ ಎಂದು ಸೂಚಿಸಿದರು.
‘ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆ ದುರಸ್ತಿ, ನಾಮಫಲಕ ಅಳವಡಿಸುವುದು ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಕೆಲಸ ತ್ವರಿತವಾಗಿ ಪೂರ್ಣಗೊಳಿಸಿ’ ಎಂದು ತಿಳಿಸಿದರು.
ಗೋಕರ್ಣ ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ಮಾತನಾಡಿ, ‘ಗ್ರಾಮ ಪಂಚಾಯಿತಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಎಲ್ಲಾ ಕಡಲತೀರ
ದಲ್ಲಿ ಕ್ಯಾಮೆರಾ ಹಾಗೂ ಬೆಳಕಿನ ವ್ಯವಸ್ಥೆಗೆ ಕ್ರಮವಹಿಸಿದರೆ ಸುರಕ್ಷತಾ ಕ್ರಮಕ್ಕೆ ಪೂರಕವಾಗುತ್ತದೆ. ಚಾರಣಕ್ಕೆ ನಿಷೇಧಿಸಿದ ಅಪಾಯಕಾರಿ ಸ್ಥಳಕ್ಕೆ ತಾತ್ಕಾಲಿಕ ಬೇಲಿ ಹಾಕಲಾಗಿದ್ದು, ಇದನ್ನು ಅರಣ್ಯ ಇಲಾಖೆಯವರು ಶಾಶ್ವತ ಬಂದ್ ಮಾಡುವ ಕ್ರಮಕ್ಕೆ ಮುಂದಾಗಬೇಕು. ಕಡಲತೀರದ ಅಸುರಕ್ಷಿತ ಸ್ಥಳದ ಎಚ್ಚರಿಕೆ ನೀಡುವ ಮಾಹಿತಿ ಫಲಕ ಅಳವಡಿಸಬೇಕು’ ಎಂದು ತಿಳಿಸಿದರು.
ಕಸದ ತೊಟ್ಟಿ ಇಡುವುದು, ಎಲ್ಲೆಂದ ರಲ್ಲಿ ಕಸ ಎಸೆಯುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಉಪ
ವಿಭಾಗಾಧಿಕಾರಿ ಶ್ರವಣಕುಮಾರ, ಕಸ
ವಿಲೇವಾರಿ ಕುರಿತು ಹಲವು ಸಲಹೆ ನೀಡಿ ಅನುಷ್ಠಾನಕ್ಕೆ ತರಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಗೋಕರ್ಣ ಗ್ರಾಮ ಪಂಚಾಯಿತಿಯ ಸುಮನಾ ಗೌಡ, ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್, ಭಟ್ಕಳ್ ಡಿವೈಎಸ್ಪಿ ಮಹೇಶ ಎಂ.ಕೆ., ಹನೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಣ್ಣು ಗೌಡ, ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಗೌಡ, ಉಪ ತಹಶೀಲ್ದಾರ್ ಟಿ.ಎಸ್.ಗಾಣಿಗೇರ್, ಕಂದಾಯ ಇಲಾಖೆಯ ಸಂತೋಷ ಶೇಟ್, ಗೋಕರ್ಣ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜುನಾಥ ಕೆ, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರ ಎಲ್. ಭಟ್ ಸ್ವಾಗತಿಸಿದರು. ಗೋಕರ್ಣ ಪಿಡಿಒ ವಿ.ಎ.ಪಟಗಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.