ADVERTISEMENT

ಪರಿಷತ್ ಚುನಾವಣೆ: ಹೈಕೋರ್ಟ್ ಆದೇಶ ಪಡೆದು ಮತ ಚಲಾಯಿಸಿದರು!

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 15:33 IST
Last Updated 10 ಡಿಸೆಂಬರ್ 2021, 15:33 IST
ಲಕ್ಷ್ಮಿ ಗೊಂಡ
ಲಕ್ಷ್ಮಿ ಗೊಂಡ   

ಕುಮಟಾ: ವಿಧಾನ ಪರಿಷತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ತಾಲ್ಲೂಕಿನ ಬರ್ಗಿ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಹೈಕೋರ್ಟ್‌ನಿಂದ ಆದೇಶ ತಂದು ಮತದಾನ ಮಾಡಿದರು.

ಲಕ್ಷ್ಮಿ ಗೊಂಡ ಈ ರೀತಿ ಹಕ್ಕು ಚಲಾಯಿಸಿದವರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, ಅವರ ಜಾತಿಯ ಬಗ್ಗೆ ವಿವಾದವಾಗಿತ್ತು. ಹಾಗಾಗಿ ತಹಶೀಲ್ದಾರ್ ನೀಡಿದ್ದ ಜಾತಿ ಪ್ರಮಾಣ ಪತ್ರವನ್ನು ಹಿಂಪಡೆಯುವಂತೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಸೂಚಿಸಿತ್ತು. ಬಳಿಕ ಲಕ್ಷ್ಮಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ತಡೆಯಾಜ್ಞೆಯೂ ಜಾರಿಯಾಗಿತ್ತು. ಈ ನಡುವೆ, ಹೈಕೋರ್ಟ್ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ಆ ಚುನಾವಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತ್ತು.

‘ಸ್ಥಳೀಯ ದಲಿತ ಸಂಘರ್ಷ ಸಮಿತಿಯ ದೂರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವರದಿ ಆಧರಿಸಿ ಮತದಾರರ ಅಂತಿಮ ಪಟ್ಟಿಯಿಂದ ಅವರ ಹೆಸರನ್ನು ಬಿಡಲಾಗಿತ್ತು. ಆದರೆ, ಹೈಕೋರ್ಟ್ ಆದೇಶದಂತೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ತಹಶೀಲ್ದಾರ್ ವಿವೇಕ ಶೇಣ್ವಿ ಮಾಹಿತಿ ನೀಡಿದರು.

ADVERTISEMENT

ಮತದಾನಕ್ಕೆ ಬಂದವರಿಗೆ ಲಸಿಕೆ
ಲಕ್ಷ್ಮೇಶ್ವರ:
ವಿಧಾನ ಪರಿಷತ್‌ ಚುನಾವಣೆಯಲ್ಲಿ ಶುಕ್ರವಾರ ಮತದಾನ ಮಾಡಲು ಬಂದ ಕೆಲ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಕೋವಿಡ್‌ ಲಸಿಕೆ ಹಾಕಲಾಯಿತು.

ಲಕ್ಷ್ಮೇಶ್ವರ ಸಮೀಪದ ಶಿಗ್ಲಿ ಗ್ರಾ.ಪಂ ಸದಸ್ಯ ಗಣೇಶ ಲಮಾಣಿ ಅವರಿಗೆ ಲಸಿಕೆ ನೀಡಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳದ ಸದಸ್ಯರಿಗೆ ಮನವೊಲಿಸಿ, ಲಸಿಕೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.