
ಶಿರಸಿ: ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಔಷಧಿಗಳು ಲಭ್ಯವಾಗಬೇಕು ಮತ್ತು ರಾಜ್ಯದಲ್ಲಿ ತಕ್ಷಣವೇ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಯಾಗಬೇಕು ಎಂಬ ಪ್ರಮುಖ ಬೇಡಿಕೆಗಳೊಂದಿಗೆ ಸೋಮವಾರ ನಗರದಲ್ಲಿ ಆರೋಗ್ಯ ಹಕ್ಕು ಜಾಥಾ ನಡೆಯಿತು.
ಡ್ರಗ್ ಆಕ್ಷನ್ ಫೋರಮ್ ಕರ್ನಾಟಕ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನದ ಭಾಗವಾಗಿ ಶಿರಸಿಯ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಜಾಥಾ ಆಯೋಜಿಸಲಾಗಿತ್ತು. ನಗರದ ಮುಖ್ಯ ಅಂಚೆ ಕಚೇರಿಯ ಎದುರು ಚಿಂತಾಮಣಿಯ ಸಾಂಸ್ಕೃತಿಕ ಕಲಾ ಬಳಗದ ಕಲಾವಿದರು ನಡೆಸಿಕೊಟ್ಟ ಬೀದಿ ನಾಟಕದ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಯಿತು.
ಈ ಬೀದಿ ನಾಟಕವು ಆರೋಗ್ಯ ಕ್ಷೇತ್ರದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು. ಅಲ್ಲಿಂದ ಮೆರವಣಿಗೆಯ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಕಾರರು, ಉಪವಿಭಾಗಾಧಿಕಾರಿ ಚಂದ್ರಶೇಖರ ಆರ್.ಜಿ. ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡ್ರಗ್ ಆ್ಯಕ್ಷನ್ ಫೋರಂ ಮುಖ್ಯಸ್ಥ ಡಾ. ಗೋಪಾಲ್ ದಾಬಡೆ, ‘ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳು ಸಿಗುತ್ತಿಲ್ಲ. ಲಭ್ಯವಿರುವ ಕೆಲವು ಔಷಧಿಗಳ ಗುಣಮಟ್ಟವೂ ತೃಪ್ತಿಕರವಾಗಿಲ್ಲ. ಇದರಿಂದ ಬಡವರು ಮತ್ತು ಸಾಮಾನ್ಯ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜತೆಗೆ ಆಸ್ಪತ್ರೆಗಳ ಖಾಸಗೀಕರಣದ ಪ್ರಯತ್ನಗಳು ಜನಸಾಮಾನ್ಯರಿಗೆ ಆರೋಗ್ಯ ಸೇವೆಗಳನ್ನು ಎಟುಕದಂತೆ ಮಾಡುತ್ತಿವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವ್ಯವಸ್ಥೆಯನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.
ಶಾರದಾ ದಾಬಡೆ ಮನವಿ ಪತ್ರ ವಾಚಿಸಿದರು. ಶಿರಸಿಯ ಕನ್ನಡ ಹಾಗೂ ಕೊಂಕಣಿ ವಿಶ್ವಕರ್ಮ ಸಂಘ, ಗೌಂಡಿ ಹಾಗೂ ಬಾರ್ ಬೆಂಡರ್ ಅಸೋಸಿಯೇಷನ್, ಆಟೋ ರಿಕ್ಷಾ ಮಾಲೀಕರ ಸಂಘ ಸೇರಿದಂತೆ ಹತ್ತಾರು ಸಂಘಟನೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.