ADVERTISEMENT

ಕಾರವಾರ: ‘ಅನಾಥ’ರಿಗೆ ಜಿಲ್ಲಾ ಆಸ್ಪತ್ರೆಯೇ ಆಧಾರ!

ಹಲವು ವರ್ಷಗಳಿಂದ ವಾಸವಿರುವ ರೋಗಿಗಳು: ಹತ್ತಿರಕ್ಕೂ ಸುಳಿಯದ ಸಂಬಂಧಿಕರು

ಸದಾಶಿವ ಎಂ.ಎಸ್‌.
Published 17 ಅಕ್ಟೋಬರ್ 2019, 19:45 IST
Last Updated 17 ಅಕ್ಟೋಬರ್ 2019, 19:45 IST
ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ವಾಸವಿರುವ ಉತ್ತರಪ್ರದೇಶದ ಯುವಕ ವಾಲಿಯಾ. ಅವರ ಎದುರು ಕುಳಿತಿರುವ ವಿಜಯಪುರದ ಜಾನ್ ಒಂದು ವರ್ಷದಿಂದ ಆಸ್ಪತ್ರೆಯಲ್ಲಿದ್ದಾರೆ
ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ವಾಸವಿರುವ ಉತ್ತರಪ್ರದೇಶದ ಯುವಕ ವಾಲಿಯಾ. ಅವರ ಎದುರು ಕುಳಿತಿರುವ ವಿಜಯಪುರದ ಜಾನ್ ಒಂದು ವರ್ಷದಿಂದ ಆಸ್ಪತ್ರೆಯಲ್ಲಿದ್ದಾರೆ   

ಕಾರವಾರ: ಈ ಮಂದಿಗೆ ಆಸ್ಪತ್ರೆಯೇನೆಲೆ. ಅಲ್ಲೇ ವಾಸ, ನಿದ್ದೆ, ಊಟಎಲ್ಲವೂ. ಆಸ್ಪತ್ರೆಯ ಸಿಬ್ಬಂದಿಯೇ ಬಂಧು ಬಳಗ. ಮಕ್ಕಳು, ಸಂಬಂಧಿಕರು ಯಾರೂ ಇತ್ತ ಸುಳಿಯದಕೊರಗಿನಲ್ಲೇ ಅವರು ದಿನಗಳೆಯುತ್ತಿದ್ದಾರೆ.

ನಗರದ ಜಿಲ್ಲಾ ಆಸ್ಪತ್ರೆಯಪ್ರತ್ಯೇಕ ವಾರ್ಡ್‌ನಲ್ಲಿ ಎರಡು ಮೂರು ವರ್ಷಗಳಿಂದ ವಾಸವಿರುವನಾಲ್ವರ ದುಃಸ್ಥಿತಿಯಿದು. ಮಲ್ಲಾಪುರ, ವಿಜಯಪುರ, ದೂರದ ಉತ್ತರ ಪ್ರದೇಶದ ಇವರನ್ನು ಆಸ್ಪತ್ರೆಯ ಶುಶ್ರೂಷಕಿಯರು ಮಾನವೀಯ ನೆಲೆಯಲ್ಲಿ ಆರೈಕೆ ಮಾಡುತ್ತಿದ್ದಾರೆ.

ಕೃಶಕಾಯದೊಂದಿಗೆ ಎರಡು ವರ್ಷಗಳಿಂದಆಸ್ಪತ್ರೆ ‍ಪಾಲಾಗಿರುವವಾಲಿಯಾ ಉತ್ತರಪ್ರದೇಶದವರು. ಅಸ್ಪಷ್ಟಧ್ವನಿಯಲ್ಲಿ ತನ್ನದು ದುಖಾವಾ ಎಂಬ ಗ್ರಾಮ, ತಂದೆಯ ಹೆಸರು ಗಿಬ್ಬಿಲಾಲ್, ತಾಯಿ ದೂಲಿ ಎಂದು ಹೇಳುತ್ತಾರೆ. ತನಗೆ ರಾಮದೇವ, ಭುವನ್ ಎಂಬ ಸಹೋದರರು ಮತ್ತು ಸೀತಾ ಎಂಬ ಸಹೋದರಿ ಇದ್ದಾಳೆ ಎಂದಷ್ಟೇ ನೆನಪಿಸಿಕೊಳ್ಳುತ್ತಾರೆ. ಆಸ್ಪತ್ರೆಗೆ ಯಾವಾಗ ಮತ್ತು ಯಾಕೆ ದಾಖಲಾದೆ ಎಂದು ಕೇಳಿದರೆ ಕೈ ಅಲ್ಲಾಡಿಸಿ, ತಿಳಿದಿಲ್ಲ ಎನ್ನುತ್ತಾರೆ.

ADVERTISEMENT

ಶಿವರಾಜ್ (60), ಎರಡು ವರ್ಷಗಳಿಂದ ಆಸ್ಪತ್ರೆಯಲ್ಲಿ ಇರುವ ಹಿರಿಯರು.ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ಗುತ್ತಿಗೆ ಆಧಾರದಲ್ಲಿಭದ್ರತಾ ಸಿಬ್ಬಂದಿಯಾಗಿದ್ದರು. ಪಾರ್ಕಿನ್‌ಸನ್ ಕಾಯಿಲೆ ಕಾಣಿಸಿಕೊಂಡ ಕಾರಣ ಕೆಲಸದಿಂದ ದೂರ ಉಳಿಯಬೇಕಾಯಿತು. ಸ್ವಂತಮನೆಯೂ ಇಲ್ಲದೆಪತ್ನಿಯೊಂದಿಗೆ ಮಲ್ಲಾಪುರದ ಬಸ್ ನಿಲ್ದಾಣದಲ್ಲಿ ವಾಸವಿದ್ದರು. ಅವರನ್ನು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಆಸ್ಪತ್ರೆಗೆ ದಾಖಲಿಸಿದರು.

‘ಅನಾರೋಗ್ಯ ‍ಪೀಡಿತರಾದ ಅವರಿಗೆ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ ಕೆಲವರು ಹಣ ಸಂಗ್ರಹಿಸಿ ಕೈಕೊಟ್ಟರು. ಆದರೆ, ಭರವಸೆ ಈಡೇರಿಸಲಿಲ್ಲ. ಇದೇವೇಳೆ ಅವರ ಪತ್ನಿಯೂ ದೂರವಾದರು’ ಎಂದು ಮಾಧವ ನಾಯಕ ವಿವರಿಸಿದರು.

ರಾಜು ಎಂಬುವವನ ಕತೆ ಇನ್ನೂ ಶೋಚನೀಯ. ಚಲಿಸುತ್ತಿದ್ದ ರೈಲಿನಿಂದ ಬಿದ್ದವನ ಕಾಲಿಗೆ ಗಂಭೀರವಾದ ಏಟಾಗಿದೆ. ಆತ ಎಲ್ಲಿಯವನು, ಕುಟುಂಬದವರು ಯಾರು ಎಂಬ ಮಾಹಿತಿಯಿಲ್ಲ. ಆತನೂ ಸ್ಪಷ್ಟವಾಗಿ ಹೇಳುತ್ತಿಲ್ಲ. ಸುಮಾರು ಎರಡೂವರೆ ವರ್ಷಗಳಿಂದ ಆಸ್ಪತ್ರೆಯಲ್ಲೇ ವಾಸವಿದ್ದಾರೆ.

ವಿಜಯಪುರದ ನಿಸರಮಟ್ಟಿಯ ಜಾನ್ (33) ಕೂಡ ಒಂದು ವರ್ಷದಿಂದ ಇಲ್ಲೇ ವಾಸ್ತವ್ಯ ಹೂಡಿದ್ದಾರೆ. ಚಿಕ್ಕ ವಯಸ್ಸಿಗೇ ಮದುವೆಯಾದ ತಮಗೆ 14 ವರ್ಷದ ಮಗಳು, ಆರು ವರ್ಷದ ಮಗನಿದ್ದಾನೆ ಎಂದು ಹೇಳುತ್ತಾರೆ. ಕಾರವಾರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಹುಷಾರಿಲ್ಲ ಎಂದು ಆಸ್ಪತ್ರೆಗೆ ಸೇರಿದ ಬಳಿಕ ಯಾರೂ ಹತ್ತಿರಕ್ಕೆ ಬರುತ್ತಿಲ್ಲ ಎಂದು ಕಣ್ಣೀರು ಸುರಿಸಿದರು.

ಮಾನವೀಯ ಸೇವೆ: ‘ಈ ಅನಾಥರಿಗೆ ಪ್ರತ್ಯೇಕ ವಾರ್ಡ್‌ನಲ್ಲಿ(ಐಸೋಲೇಷನ್) ವಾಸವಿರಲು ಅವಕಾಶ ಕೊಡಲಾಗಿದೆ. ಮಾನವೀಯತೆಯ ದೃಷ್ಟಿಯಿಂದ ಅವರನ್ನು ಹೊರಗೆಕಳುಹಿಸಲೂ ಆಗುವುದಿಲ್ಲ. ನಮ್ಮ ಸಿಬ್ಬಂದಿ ತುಂಬ ಶ್ರದ್ಧೆಯಿಂದ ಈ ರೋಗಿಗಳನ್ನು ಕಾಳಜಿ ಮಾಡುತ್ತಾರೆ’ ಎನ್ನುತ್ತಾರೆ ಜಿಲ್ಲಾಸರ್ಜನ್ ಡಾ.ಶಿವಾನಂದ ಕುಡ್ತರಕರ್.

‘ಊಟ, ತಿಂಡಿ, ಟೂಥ್‌ಪೇಸ್ಟ್ ಮುಂತಾದವುಗಳಿಗೆ ಇತರ ರೋಗಿಗಳ ಸಂಬಂಧಿಕರನ್ನು ಅವಲಂಬಿಸುತ್ತಾರೆ. ಸಣ್ಣ ಪುಟ್ಟ ಖರ್ಚುಗಳಿಗೆ ಯಾರೋ ದಾನಿಗಳು ಬಂದು ಸಹಾಯ ಮಾಡುತ್ತಾರೆ’ ಎಂದು ತಿಳಿಸಿದರು.

‘ಕೆಲವರು ತಮ್ಮ ವೃದ್ಧ ತಂದೆ, ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಸುಮ್ಮನಾಗುತ್ತಾರೆ. ಅವರು ಮೃತಪಟ್ಟ ಬಳಿಕ ಬಂದು ಶವ ತೆಗೆದುಕೊಂಡು ಹೋಗುತ್ತಾರೆ. ಜೊತೆಗೆ ಆಸ್ತಿ ದಾಖಲೆಗಾಗಿ ಮರಣ ಪ್ರಮಾಣಪತ್ರವನ್ನೂ ಕೇಳುತ್ತಾರೆ’ ಎಂದು ಬೇಸರಿಸಿದರು.

*
ಜಿಲ್ಲಾ ಆಸ್ಪತ್ರೆಯಲ್ಲಿರುವ ಅನಾಥರಿಗೆ ನಮ್ಮ ಸಂಘಟನೆಯಿಂದ ಪ್ರತಿ ವರ್ಷ ಕ್ಷೌರ ಮಾಡಿಸಿ ಹೊಸ ಬಟ್ಟೆ ನೀಡಲಾಗುತ್ತದೆ. ಈ ರೋಗಿಗಳ ಸಂಬಂಧಿಕರು ಇನ್ನಾದರೂ ಗಮನಹರಿಸಬೇಕು.
-ಮಾಧವ ನಾಯಕ, ಜನಶಕ್ತಿ ವೇದಿಕೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.