ADVERTISEMENT

ಭೂಮಿ ಹಕ್ಕು ನೀಡಲಾಗದ ಜನಪ್ರತಿನಿಧಿಗಳು ಸತ್ತಂತೆ: ಕಾಗೋಡು ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 6:42 IST
Last Updated 12 ಸೆಪ್ಟೆಂಬರ್ 2021, 6:42 IST
ಕಾಗೋಡು ತಿಮ್ಮಪ್ಪ
ಕಾಗೋಡು ತಿಮ್ಮಪ್ಪ   

ಶಿರಸಿ: ಅರಣ್ಯ ಭೂಮಿ ಹಕ್ಕು ಮಂಜೂರಾತಿಗೆ ನಿರ್ಲಕ್ಷ ಧೋರಣೆ ತಾಳಿರುವ ಜನಪ್ರತಿನಿಧಿಗಳು ಸತ್ತಂತೆ ಇದ್ದಾರೆ. ಅಧಿಕಾರಿಗಳು ಹುಚ್ಚರಂತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಆರೋಪಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅರಣ್ಯ ಅತಿಕ್ರಮಣದಾರರ ಸ್ಥಿತಿ ಕಣ್ಣೀರು ತರಿಸುತ್ತಿದೆ. ಭೂಮಿ ಹಕ್ಕು ಮಂಜೂರಾತಿಗೆ ಸಲ್ಲಿಕೆಯಾಗಿದ್ದ ಶೇ.62.49 ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಕೇವಲ ಶೇ.5.35 ಅರ್ಜಿಗಳಿಗೆ ನ್ಯಾಯ ಸಿಕ್ಕಿದೆ. ಇದು ಸರ್ಕಾರ ಬಡವರ ಪರ ಕೆಲಸ ಮಾಡುತ್ತಿಲ್ಲ ಎಂಬುದರ ದ್ಯೋತಕ’ ಎಂದು ಟೀಕಿಸಿದರು.

‘ಸಾಗುವಳಿದಾರರು ಅರಣ್ಯ ಭೂಮಿಯನ್ನು ಹಾಳು ಮಾಡಿ ಕೃಷಿ ಮಾಡುತ್ತಿಲ್ಲ. ಈಗ ನಗರಗಳು ಸೃಷ್ಟಿಯಾದ ಜಾಗಗಳು ಹಿಂದೆ ಕಾಡಾಗಿದ್ದವು. ಸರ್ಕಾರ ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯ ಮಾಡುತ್ತಿದೆ. ಬಡವರ ಪಾಲಿಗೆ ಸರ್ಕಾರಗಳು ಸತ್ತು ಹೋಗಿವೆ’ ಎಂದರು.

‘ಹೋರಾಟದಿಂದಲೆ ಸಮಸ್ಯೆಗೆ ಮುಕ್ತಿ ಸಿಗಬೇಕಿದೆ. ಅಧಿಕಾರಿಗಳಿಗೆ ತಾಳ್ಮೆ ಇಲ್ಲ. ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿ ಹಕ್ಕು ನೀಡಲು ಎಲ್ಲ ರಾಜಕೀಯ ಪಕ್ಷಗಳು ನಿರ್ಲಕ್ಷ ಧೋರಣೆ ತಳೆದಿವೆ’ ಎಂದು ದೂರಿದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಧರ್ಮರಾಜ್, ರಮೇಶ ಹೆಗಡೆ, ತಿ.ನ.ಶ್ರೀನಿವಾಸ, ಜಿ.ಎಂ.ಶೆಟ್ಟಿ, ಭೀಮಶಿ ವಾಲ್ಮೀಕಿ, ಬೋರಯ್ಯ, ಚಿಕ್ಕಣ್ಣ ಮೈಸೂರು, ಕೆ.ರಾಮ ಕೊಡಗು, ರಮಾನಂದ ನಾಯಕ ಅಚವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.