ವಿಶ್ವೇಶ್ವರ ಹೆಗಡೆ ಕಾಗೇರಿ
– ಪ್ರಜಾವಾಣಿ ಚಿತ್ರ
ಕಾರವಾರ: ಬಡವರಿಗೆ ಮಂಜೂರಾದ ಮನೆಯಲ್ಲೂ ಲಂಚ ಕೇಳುವ ಹೀನ ಸ್ಥಿತಿಗೆ ರಾಜ್ಯ ಸರ್ಕಾರ ಇಳಿದಿರುವುದು ಅರಾಜಕತೆಯ ಪರಮಾವಧಿ. ಇಂತ ಭ್ರಷ್ಟ ಸರ್ಕಾರ ನಡೆಸುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ' ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು.
'ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಬಿ.ಆರ್.ಪಾಟೀಲ ಬಹಿರಂಗಪಡಿಸಿದ್ದಾರೆ. ಇದು ಕಾಂಗ್ರೆಸ್ ಭ್ರಷ್ಟಾಚಾರ ಆಡಳಿತದ ಮುಖವಾಡ ಕಳಚಿದೆ' ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ದೂರಿದರು.
'ವಸತಿ ಯೋಜನೆ ಮನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ 15 ರಷ್ಟು ಮೀಸಲಾತಿ ಜಾರಿ ಮಾಡಲುಹೊರಟಿರುವುದು ಓಲೈಕೆಯ ಪರಮಾವಧಿ. ಇದು ಸಿಎಂ, ಡಿಸಿಎಂ ಅವರ ಬೇಕಾಬಿಟ್ಟಿ ಆಡಳಿತಕ್ಕೆ ಹಿಡಿದ ಕೈಗನ್ನಡಿ' ಎಂದು ಆರೋಪಿಸಿದರು.
'ಸಚಿವ ಸಂಪುಟ ಜಾತಿ ಜನಗಣತಿ ವರದಿ ತಿರಸ್ಕರಿಸಿದ್ದರೆ ಮರು ಗಣತಿ ನಡೆಸುವ ಬಗ್ಗೆ ನಿರ್ಣಯಿಸಬಹುದಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿದ ಕಾರಣಕ್ಕೆ ರಾಜ್ಯ ಸರ್ಕಾರ ಮರುಗಣತಿ ಮಾಡಿ ಜನರ ತೆರಿಗೆ ಹಣ ಪೋಲು ಮಾಡಲು ಹೊರಟಿರುವುದು ಮೂರ್ಖತನದ ಪರಮಾವಧಿ' ಎಂದರು
'ರಾಜ್ಯ ಸರ್ಕಾರ ಹೊಸದಾಗಿ ಜಾತಿ ಜನಗಣತಿ ಮಾಡುವ ಬದಲು ಕೇಂದ್ರ ಸರ್ಕಾರ ಮಾಡಲಿರುವ ಗಣತಿಗೆ ಸಹಕಾರ ನೀಡಬೇಕು. ಅಗತ್ಯ ಸಲಹೆಗಳಿದ್ದರೆ ನೀಡಲಿ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.