ಕಾರವಾರ: ಸತತವಾಗಿ ಮಳೆಯಾಗುತ್ತಿರುವ ಪರಿಣಾಮ ಗಂಗಾವಳಿ ನದಿ ಭರ್ತಿಯಾಗಿ ಹರಿಯುತ್ತಿದೆ. ಅಂಕೋಲಾ ತಾಲ್ಲೂಕಿನ ಡೊಂಗ್ರಿ ಗ್ರಾಮದಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಮಳೆ ಮುಂದುವರಿದರೆ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
'ಕಳೆದ ವರ್ಷವೂ ಆ.5ರಂದು ಗಂಗಾವಳಿ ನದಿಯ ನೀರು ಉಕ್ಕಿ ಹರಿದಿತ್ತು. ನಂತರ ಭೀಕರ ಪ್ರವಾಹ ಉಂಟಾಗಿದ್ದು ಇನ್ನೂ ಕಣ್ಣ ಮುಂದಿದೆ. ರಸ್ತೆ ಈ ರೀತಿ ಜಲಾವೃತವಾಗಿ ಸಂಪರ್ಕ ಕಡಿತವಾಗುವುದು ಪ್ರತಿ ವರ್ಷದ ವಿದ್ಯಮಾನವಾಗಿದೆ. ಡೊಂಗ್ರಿ ಗ್ರಾಮದಲ್ಲಿ ಸುಮಾರು 25 ಮನೆಗಳಿವೆ. ಮಳೆ ಮುಂದುವರಿದರೆ ಅಪಾಯವಾಗಬಹುದು' ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.
'ಹೊಸ ಸೇತುವೆ ನಿರ್ಮಾಣಕ್ಕೆ ಶಾಸಕಿ ರೂಪಾಲಿ ನಾಯ್ಕ ಶಿಲಾನ್ಯಾಸ ನೆರವೇರಿಸಿದ್ದಾರೆ. ನೀರು ಉಕ್ಕಿ ಹರಿಯುವ ಪ್ರದೇಶವನ್ನು ಮಣ್ಣು ತುಂಬಿ ಎತ್ತರಿಸುವ ಕಾಮಗಾರಿಯೂ ಯೋಜನೆಯಲ್ಲಿ ಸೇರಿದೆ' ಎಂದೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.