ADVERTISEMENT

ಜೆಡಿಎಸ್‌ ಜಾತ್ಯತೀತವಾದಕ್ಕೆ ತರ್ಪಣ ಬಿಟ್ಟು ಬಹಳ ದಿನವಾಯ್ತು: ಸಿದ್ದರಾಮಯ್ಯ

ಈಗ ಜಾತ್ಯತೀತವಾಗಿ ಉಳಿದಿಲ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 5:01 IST
Last Updated 2 ಆಗಸ್ಟ್ 2021, 5:01 IST
ಕಾರವಾರದಲ್ಲಿ ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ ಮತ್ತು ಆರ್‌.ವಿ.ದೇಶಪಾಂಡೆ
ಕಾರವಾರದಲ್ಲಿ ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ ಮತ್ತು ಆರ್‌.ವಿ.ದೇಶಪಾಂಡೆ   

ಕಾರವಾರ: 'ಜೆಡಿಎಸ್ ಈಗ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಜಾತ್ಯತೀತವಾದಕ್ಕೆ ತರ್ಪಣ ಬಿಟ್ಟು ಬಹಳ ದಿನವಾಯ್ತು. ನಾವಿದ್ದಾಗಿನ ಪಕ್ಷ ಅದಲ್ಲ. ಅಲ್ಲಿಂದ ಬೇರೆ ಪಕ್ಷಕ್ಕೆ ಬಂದವರೂ ಜೆಡಿಎಸ್‌ನವರಾಗ್ತಾರಾ? ನಾನು ಅಲ್ಲಿಂದಲೇ ಬಂದವನು, ಆರ್.ವಿ.ದೇಶಪಾಂಡೆ ಜನತಾ ಪಕ್ಷದಿಂದ ಬಂದವರು. ಹಾಗಂತ ನಾವೂ ಈಗ ಆ ಪಕ್ಷದವರು ಹೇಗಾಗ್ತೇವೆ' ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಜೆಡಿಎಸ್ ಮೃದು ಧೋರಣೆ ಹೊಂದಿದೆ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು, ಬೊಮ್ಮಾಯಿ ಅವರನ್ನು ನಮ್ಮವರು ಎನ್ನುತ್ತಿದ್ದಾರೆ' ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದರು.

'ಬಿಜೆಪಿಯ ಹಲವು ನಾಯಕರು ತಮ್ಮ ವಿರುದ‌್ಧ ಸಿ.ಡಿ ಬಿಡುಗಡೆ ಮಾಡದಂತೆ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಬಿಜೆಪಿ ಸರ್ಕಾರವೇ ಸಂಪೂರ್ಣ ಭ್ರಷ್ಟವಾಗಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾಕೆ ಕೆಳಗಿಳಿಸಿದರು' ಎಂದು ಪ್ರಶ್ನಿಸಿದರು.

ADVERTISEMENT

'ಹಾಗಿದ್ದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಬಗ್ಗೆ ಏನು ಹೇಳುತ್ತೀರಿ' ಎಂದು ಕೇಳಿದಾಗ, 'ಅವರ ಬಗ್ಗೆ ಏನು ಹೇಳುವುದು? ಇಡೀ ಪಕ್ಷವೇ ಭ್ರಷ್ಟವಾಗಿದೆ' ಎಂದು ಉತ್ತರಿಸಿದರು.

'ಕೋರ್ಟ್ ಮೊರೆ ಹೋಗುತ್ತಿರುವ ಬಿಜೆಪಿ ಮುಖಂಡರು ಯಾವುದೋ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದರ್ಥ. ಇಲ್ಲದಿದ್ರೆ ಸುಮ್ ಸುಮ್ಮನೆ ಯಾಕೆ ನ್ಯಾಯಾಲಯಕ್ಕೆ ಅರ್ಜಿ ಹಾಕ್ತಾರೆ? ಅದು ಲೈಂಗಿಕ ಹಗರಣ ಆಗಿರಬಹುದು, ಹಣಕಾಸು ಆಗಿರಬಹುದು ಅಥವಾ ಮತ್ಯಾವುದೋ ಆಗಿರಬಹುದು' ಎಂದು ಹೇಳಿದರು.

'ತಮ್ಮ ಮುಖ ಬಳಸಿಕೊಂಡು ನಕಲಿ ಸಿ.ಡಿ ಮಾಡಿ ಉದ್ದೇಶಪೂರ್ವಕ ತೇಜೋವಧೆ ಮಾಡಲು ಬಳಕೆ ಮಾಡ್ತಾರೆ ಎಂದು ಅವರು ಸಮರ್ಥನೆ ಕೊಟ್ಟಿದ್ದಾರಲ್ಲ' ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಕ್ಕೆ ಸಿದ್ದರಾಮಯ್ಯ ಅವರು, 'ಬೇರೆ ನಾಯಕರು ಯಾಕೆ ಕೋರ್ಟ್‌ಗೆ ಹೋಗ್ತಿಲ್ಲ? ಕೆಲವರದ್ದು ಮಾತ್ರ ಸಿ.ಡಿಗಳನ್ನು ಯಾಕೆ ಮಾಡ್ತಾರೆ? ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡ್ರಂತೆ.. ಹಾಗಾಯ್ತು' ಎಂದು ಟೀಕಿಸಿದರು.

'ಬಿಜೆಪಿಯವರು ತಮ್ಮನ್ನು ಅತ್ಯಂತ ಸುಸಂಸ್ಕೃತರು ಎಂದು ಹೇಳಿಕೊಳ್ತಾರೆ. ಆದರೆ, ಅವರಷ್ಟು ಸಂಸ್ಕೃತಿ ಇಲ್ಲದವರು ಮತ್ಯಾರೂ ಇಲ್ಲ' ಎಂದರು.

'ಕೋವಿಡ್ ಮೂರನೇ ಅಲೆ ತಡೆಯಲು ಸರ್ಕಾರವು ರಾಜ್ಯದ ಗಡಿಗಳಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಂಥ ಸಂಕಷ್ಟದ ಸಂದರ್ಭದಲ್ಲಿ ಸಂಪುಟ ರಚನೆ ಮಾಡಲು ಮುಖ್ಯಮಂತ್ರಿ ಪದೇಪದೇ ಹೈಕಮಾಂಡ್‌ ಭೇಟಿಗೆ ದೆಹಲಿಗೆ ಯಾಕೆ ಹೋಗಬೇಕು' ಎಂದು ಪ್ರಶ್ನಿಸಿದರು.

ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ಮುಖಂಡ ಸತೀಶ ಸೈಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.