
ಕಾರವಾರ: ಪ್ರಾಕೃತಿಕವಾಗಿ ಸಂಪದ್ಭರಿತವಾಗಿರುವ ಜಿಲ್ಲೆಯಲ್ಲಿ ಪರಿಸರಕ್ಕೆ ಮಾರಕವಾದ ಬೃಹತ್ ಯೋಜನೆಗಳನ್ನು ಜಾರಿಗೊಳಿಸುವ ಸರ್ಕಾರದ ಪ್ರಯತ್ನದ ವಿರುದ್ಧ ವರ್ಷದುದ್ದಕ್ಕೂ ಪ್ರತಿಭಟನೆಗಳು ನಡೆದವು.
ಹೊನ್ನಾವರದ ಟೊಂಕದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕಾಗಿ ರಸ್ತೆ ನಿರ್ಮಿಸುವ ಕೆಲಸ ಆರಂಭಿಸಿದಾಗ ಸ್ಥಳೀಯರು ಸಿಡಿದೆದ್ದರು. ನಿಷೇಧಾಜ್ಞೆ ಜಾರಿಗೊಳಿಸಿ, ಜಮೀನು ಸ್ವಾಧೀನಕ್ಕೆ ಪಡೆಯುವ ಯತ್ನಕ್ಕೆ ಪ್ರತಿಭಟನಕಾರರು ತಡೆಯೊಡ್ಡಿದ್ದರು. ಪ್ರತಿಭಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಹೋರಾಟ ಹತ್ತಿಕ್ಕುವ ಯತ್ನವೂ ನಡೆಯಿತು. ಇದಾದ ಕೆಲವೇ ದಿನದೊಳಗೆ ಅಂಕೋಲಾದ ಕೇಣಿಯಲ್ಲಿ ಆಳಸಮುದ್ರ ಗ್ರೀನ್‌ಫೀಲ್ಡ್ ಬಂದರು ಯೋಜನೆಗೆ ಸರ್ವೆ ಕಾರ್ಯ ಆರಂಭವಾದೊಡನೆ ಪ್ರತಿಭಟನೆಗಳು ನಡೆದವು. ಬೇಲೆಕೇರಿಯಲ್ಲಿ ಸಮುದ್ರದಲ್ಲಿ ನೂರಾರು ದೋಣಿ ನಿಲುಗಡೆ ಮಾಡಿ ಪ್ರತಿಭಟನೆ ನಡೆದಿದ್ದವು.
2025 ಕೊನೆಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇವೆ. ಕಳೆದ ವರ್ಷ ಅತಿವೃಷ್ಟಿಯ ಹೊಡೆತಕ್ಕೆ ನಲುಗಿದ್ದ ಉತ್ತರ ಕನ್ನಡ ಜಿಲ್ಲೆ ಈ ಬಾರಿ ಮಳೆಗಾಲದಲ್ಲಿ ದೊಡ್ಡಮಟ್ಟದ ಭೂಕುಸಿತದ ಅವಘಡ ಎದುರಿಸಲಿಲ್ಲ. ಆದರೆ, ಬೃಹತ್ ಯೋಜನೆಗಳ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಈ ವರ್ಷ ಕಳೆದುಹೋಗಿದೆ. ಈ ವರ್ಷದಲ್ಲಿ ಜಿಲ್ಲೆಯಲ್ಲಿ ನಡೆದ ಮಹತ್ವದ ಘಟನೆಗಳ ಮೆಲುಕು ಇಲ್ಲಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧವೂ ಹೊನ್ನಾವರ ಭಾಗದಲ್ಲಿ ಸಾಲುಸಾಲು ಪ್ರತಿಭಟನೆಗಳು ನಡೆದವು. ಕೇಣಿ ಬಂದರು ಯೋಜನೆ ಮತ್ತು ಪಂಪ್ಡ್ ಸ್ಟೋರೇಜ್ ಯೋಜನೆಗಳ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಸಾವಿರಾರು ಜನರು ಪಾಲ್ಗೊಂಡು ಯೋಜನೆ ವಿರುದ್ಧ ಧ್ವನಿ ಎತ್ತಿದ್ದರು.
ಕರಾವಳಿ ಭಾಗದಂತೆ ಘಟ್ಟದ ಮೇಲಿನ ಶಿರಸಿ, ಯಲ್ಲಾಪುರ ಮತ್ತು ಸಿದ್ದಾಪುರ ಭಾಗದಲ್ಲಿಯೂ ಬೇಡ್ತಿ–ವರದಾ ನದಿ ಜೋಡಣೆ ವಿರುದ್ಧ ಸರಣಿ ಪ್ರತಿಭಟನೆಗಳು ನಡೆದವು. ಈ ಯೋಜನೆ ವಿರೋಧಿಸುವ ಹೊತ್ತಲ್ಲೇ ಸರ್ಕಾರ ಅಘನಾಶಿನಿ–ವೇದಾವತಿ ನದಿ ಜೋಡಣೆ ಯೋಜನೆ ಜಾರಿಗೆ ಮುಂದಾಗಿರುವ ಸುದ್ದಿ ಬೆಂಕಿಗೆ ತುಪ್ಪ ಸುರಿದಂತಾಯಿತು. ಇದರಿಂದ ಪ್ರತಿಭಟನೆ ಕಾವು ಮತ್ತಷ್ಟು ಹೆಚ್ಚಿತು.
ಮಳೆಗಾಲದಲ್ಲಿ ಕಾರವಾರ ತಾಲ್ಲೂಕಿನ ಬಾಳೆಮನೆ ಸಮೀಪ ಕದ್ರಾ–ಕೊಡಸಳ್ಳಿ ಮಾರ್ಗದಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿತ್ತು. ಇದರಿಂದಾಗಿ ಬಾಳೆಮನೆ, ಸೂಳಗೇರಿ ಮುಂತಾದ ಗ್ರಾಮಗಳಿಗೆ ತಿಂಗಳುಗಟ್ಟಲೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕುಮಟಾ ತಾಲ್ಲೂಕಿನ ದೇವಿಮನೆ ಘಟ್ಟದಲ್ಲಿಯೂ ಮೂರು ಕಡೆಗಳಲ್ಲಿ ಕುಸಿತ ಉಂಟಾಯಿತು.
2025ರಲ್ಲಿ ನಡೆದ ಪ್ರಮುಖ ಘಟನೆಗಳು: ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರದ ಮೊಗದ್ದೆ ಸಮೀಪ ರಾಷ್ಟ್ರೀಯ ಹೆದ್ದಾರಿ–63ರಲ್ಲಿ ತರಕಾರಿ ಸಾಗಿಸುತ್ತಿದ್ದ ಲಾರಿಯೊಂದು ಉರುಳಿಬಿದ್ದು ಅದರಲ್ಲಿದ್ದ ಹಾವೇರಿ ಜಿಲ್ಲೆ ಸವಣೂರಿನ 10 ಮಂದಿ ಮೃತಪಟ್ಟಿದ್ದರು. ಮೊದಲ ಬಾರಿಗೆ 9 ರಾಷ್ಟ್ರಗಳೊಂದಿಗೆ ಸೇರಿ ಭಾರತೀಯ ನೌಕಾದಳವು ಹಿಂದೂ ಮಹಾಸಾಗರದಲ್ಲಿ ‘ಐಎನ್ಎಸ್ ಸುನೈನಾ’ ಯುದ್ಧನೌಕೆ ಮೂಲಕ ಗಸ್ತು ಚಟುವಟಿಕೆ ನಡೆಸುವ ‘ಐಒಎಸ್ ಸಾಗರ’ಕ್ಕೆ (ಎಲ್ಲ ವಲಯಗಳ ಸುರಕ್ಷತೆ ಮತ್ತು ಬೆಳವಣಿಗೆಗೆ ಪೂರಕವಾದ ಭಾರತೀಯ ಸಮುದ್ರ ನೌಕೆ) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರವಾರದ ಕದಂಬ ನೌಕಾನೆಲೆಯಲ್ಲಿ ಚಾಲನೆ ನೀಡಿದ್ದರು. ಪ್ರಾಚೀನ ಕಾಲದ ಮಾದರಿಯಲ್ಲೇ ಸಿದ್ಧಪಡಿಸಲಾದ ಭಾರತೀಯ ನೌಕಾಸೇನೆಯ ಹಡಗು ‘ಐಎನ್ಎಸ್ ಕೌಂಡಿನ್ಯ’ ಕಾರವಾರದ ಕದಂಬ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಂಡಿತು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ನೌಕೆ ಲೋಕಾರ್ಪಣೆಗೊಳಿಸಿದರು. ಬೇಲೆಕೇರಿ ಬಂದರಿನಿಂದ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ ಸೈಲ್ ಜೈಲು ಶಿಕ್ಷೆಗೆ ಗುರಿಯಾದರು. ಟಿಬೆಟನ್ ಬೌದ್ಧ ಧರ್ಮಗುರು ದಲೈ ಲಾಮಾ 6 ವರ್ಷಗಳ ಬಳಿಕ ಮುಂಡಗೋಡದ ಟಿಬೆಟನ್ ಕ್ಯಾಂಪ್‌ಗೆ ಭೇಟಿ ನೀಡಿದರು. ಹೊನ್ನಾವರ ತಾಲ್ಲೂಕಿನ ಮಂಕಿ ಪಟ್ಟಣ ಪಂಚಾಯಿತಿಗೆ ಐದು ವರ್ಷಗಳ ಬಳಿಕ ಚುನಾವಣೆ ನಡೆಯಿತು. ಬಿಜೆಪಿ ಬಹುಮತ ಪಡೆಯಿತು. ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸಿದ್ದಾಪುರ ತಾಲ್ಲೂಕು ಗೋಳಗೋಡದ ಕೆ.ಪಿ.ಹೆಗಡೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಹೊನ್ನಾವರದ ಗೌರಿ ನಾಯ್ಕ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿತು.
ಮರೆಯಾದ ಸುಕ್ರಜ್ಜಿ ಹಾಲಕ್ಕಿ ಸಮುದಾಯದ ಜಾನಪದ ಹಾಡುಗಳನ್ನು ಹಾಡುವ ಜೊತೆಗೆ ಮದ್ಯಪಾನ ವಿರೋಧಿ ಹೋರಾಟದಿಂದ ಖ್ಯಾತಿಗಳಿಸಿದ್ದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಅಂಕೋಲಾ ತಾಲ್ಲೂಕು ಬಡಗೇರಿಯ ಸುಕ್ರಿ ಬೊಮ್ಮ ಗೌಡ 88ನೇ ವಯಸ್ಸಿನಲ್ಲಿ ನಿಧನರಾದರು. ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದು ಹಿರಿಯ ಗಾಂಧಿವಾದಿ ಶಿರಸಿಯ ಕಾಶಿನಾಥ ಮೂಡಿ ನವೆಂಬರ್‌ನಲ್ಲಿ ನಿಧನರಾದರು.
ಹೆಚ್ಚಿದ ‘ಗುಂಡೇಟು’ ಸದ್ದು ಈ ವರ್ಷದ ಆರಂಭದಲ್ಲಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಿತ್ತು. ಗೋ ಹತ್ಯೆ ಹಣ ಅಕ್ರಮ ಸಾಗಣೆ ಉದ್ಯಮಿ ಅಪಹರಣ ನಗರಸಭೆ ಮಾಜಿ ಸದಸ್ಯನ ಹತ್ಯೆ ವೃದ್ಧೆಯ ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸರ ಕೈಗೆ ಸಿಕ್ಕ ಆರೋಪಿಗಳಿಗೆ ಪೊಲೀಸರು ‘ಗುಂಡೇಟು’ ಹೊಡೆದರು. ಈ ಘಟನೆಗಳು ಜಿಲ್ಲೆಯಲ್ಲಿ ದೊಡ್ಡ ಸಂಚಲನ ಮೂಡಿಸಿದವು. ಪ್ರತ್ಯೇಕ ಘಟನೆಗಳಲ್ಲಿ 8 ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಹಾರಿಸಿದ ಗುಂಡೇಟಿನಿಂದ ಗಾಯಗೊಂಡಿದ್ದರು. ವರ್ಷಾಂತ್ಯದ ವೇಳೆಗೆ ಅಪರಾಧ ಚಟುವಟಿಕೆಗಳು ತಗ್ಗಿದ್ದರೂ ಗಾಂಜಾ ಸೇವನೆ ಪ್ರಕರಣಗಳು ಹೆಚ್ಚಿದವು. ಈ ವರ್ಷ ಜಿಲ್ಲೆಯಲ್ಲಿ ಮಾದಕ ಪದಾರ್ಥ ಸೇವನೆ ಮಾಡಿದವರ ವಿರುದ್ಧ 300ಕ್ಕೂ ಹೆಚ್ಚು ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.