ADVERTISEMENT

ಕಾರವಾರ | ಉಪಯೋಗಕ್ಕಿಲ್ಲ ಎಪಿಎಂಸಿ ಉಗ್ರಾಣ

ಮಳೆಗಾಲದಲ್ಲಿ ಜಲಾವೃತ ಸಮಸ್ಯೆ:ಬಾರದ ಕೃಷಿ ಉತ್ಪನ್ನ

ಗಣಪತಿ ಹೆಗಡೆ
Published 18 ಜನವರಿ 2026, 7:03 IST
Last Updated 18 ಜನವರಿ 2026, 7:03 IST
ಕಾರವಾರದ ಬಾಂಡಿಶಿಟ್ಟಾದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಗ್ರಾಣ ಕಟ್ಟಡ.
ಕಾರವಾರದ ಬಾಂಡಿಶಿಟ್ಟಾದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಗ್ರಾಣ ಕಟ್ಟಡ.   

ಕಾರವಾರ: ಕೋಟ್ಯಂತರ ವೆಚ್ಚ ಮಾಡಿ ನಿರ್ಮಿಸಿದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಎರಡು ಉಗ್ರಾಣ, ದಶಕಗಳ ಹಿಂದೆ ನಿರ್ಮಿಸಿದ ಉಗ್ರಾಣಗಳು ಬಳಕೆಯಾಗದೆ ಉಳಿದುಕೊಂಡಿವೆ.

ಕೃಷಿ ಚಟುವಟಿಕೆ ಕಳೆಗುಂದಿರುವ ಈ ತಾಲ್ಲೂಕಿನಲ್ಲಿ ಎಪಿಎಂಸಿಗೆ ಆದಾಯದ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಅದರ ನಡುವೆಯೂ ರೈತರು ಬೆಳೆದ ಬೆಳೆಗಳ ದಾಸ್ತಾನು ಮಾಡಲು ಸರ್ಕಾರ ಎರಡು ದಶಕಗಳ ಹಿಂದೆ 200 ಮೆಟ್ರಿಕ್ ಟನ್ ಸಾಮರ್ಥ್ಯದ ಉಗ್ರಾಣವನ್ನು ನಿರ್ಮಿಸಿತ್ತು. ಮೂರು ವರ್ಷಗಳ ಹಿಂದೆ ಕೋಟಿ ರು.ವೆಚ್ಚದಲ್ಲಿ ತಲಾ 500 ಟನ್ ಸಾಮರ್ಥ್ಯದ ಎರಡು ಉಗ್ರಾಣವನ್ನು ನಿರ್ಮಿಸಲಾಗಿದೆ.

ಆದರೆ, ಮೂರು ಉಗ್ರಾಣಗಳು ಈವರೆಗೆ ಬಳಕೆಗೆ ಸಿಕ್ಕಿಲ್ಲ. ಕೋಟ್ಯಂತರ ವೆಚ್ಚ ಮಾಡಿದ್ದರೂ ಅವುಗಳಿಂದ ಎಪಿಎಂಸಿಗೂ ಆದಾಯ ಲಭಿಸಿಲ್ಲ. ಉಗ್ರಾಣ ಸೇರಿದಂತೆ ಎಪಿಎಂಸಿ ಆವರಣದಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವ ಕಾರಣಕ್ಕೆ ಬಳಕೆಗೆ ನೀಡಲು ಹಿಂದೇಟು ಹಾಕಲಾಗಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.

ADVERTISEMENT

‘ಎಪಿಎಂಸಿ ಕಚೇರಿ, ಉಗ್ರಾಣಗಳಿರುವ ಜಾಗ ವಿಶಾಲವಾಗಿದ್ದರೂ ಸರಿಯಾಗಿ ಬಳಕೆಗೆ ಸಿಗುತ್ತಿಲ್ಲ. ಜಿಲ್ಲೆಯ ಹಲವು ಎಪಿಎಂಸಿಗಳು ರೈತರಿಗೆ ಉಪಯೋಗವಾಗಿದ್ದರೂ, ಕಾರವಾರ ಎಪಿಎಂಸಿ ಮೂಲಕ ಯಾವುದೇ ಕೃಷಿ ಉತ್ಪನ್ನ ವಹಿವಾಟು ನಡೆದಿಲ್ಲ. ಆದರೂ, ಕೋಟ್ಯಂತರ ವೆಚ್ಚ ಮಾಡಿ ಉಗ್ರಾಣ ನಿರ್ಮಿಸಿ ಅನುದಾನ ಪೋಲು ಮಾಡಲಾಗಿದೆ’ ಎನ್ನುತ್ತಾರೆ ಕೃಷಿಕ ಆನಂದು ನಾಯ್ಕ.

‘ಮಳೆಗಾಲದಲ್ಲಿ ಉಗ್ರಾಣವಿರುವ ಜಾಗದಲ್ಲಿ ಎರಡರಿಂದ ನಾಲ್ಕು ಅಡಿಗೂ ಹೆಚ್ಚು ಎತ್ತರದವರೆಗೆ ನೀರು ನಿಲ್ಲುತ್ತದೆ. ಕೃಷಿ ಉತ್ಪನ್ನ ಸೇರಿದಂತೆ ಯಾವುದೇ ಸರಕು ದಾಸ್ತಾನಿಗೆ ಕಟ್ಟಡ ಯೋಗ್ಯವಾಗಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಕಟ್ಟಡ ನಿರ್ಮಾಣಗೊಂಡಿದೆ. ಸೌಕರ್ಯ ಇದ್ದರೂ ಬಳಕೆಗೆ ಸಿಗದಂತಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಉಗ್ರಾಣಕ್ಕೆ ರಸ್ತೆ ನಿರ್ಮಿಸುವ ಕೆಲಸ ನಡೆದಿದೆ. ಈ ಮಳೆಗಾಲದಲ್ಲಿ ಇಲ್ಲಿನ ಸ್ಥಿತಿಗತಿ ಪರಿಶೀಲಿಸಿದ ಬಳಿಕ ಉಗ್ರಾಣವನ್ನು ಕರ್ನಾಟಕ ಆಹಾರ ನಿಗಮಕ್ಕೆ ಬಾಡಿಗೆಗೆ ನೀಡಲು ನಿರ್ಧರಿಸಲಾಗುತ್ತದೆ
ಅಹಮದ್ ಅಲಿ ಐಸೂರು ಎಪಿಎಂಸಿ ಕಾರ್ಯದರ್ಶಿ

ಸಾಲದ ಸುಳಿಯಲ್ಲಿ ಎಪಿಎಂಸಿ ‘ಅಂಕೋಲಾದಲ್ಲಿ ಉಗ್ರಾಣ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಿದ ಜಮೀನಿಗೆ ಹೆಚ್ಚುವರಿ ಪರಿಹಾರ ನೀಡಲು ಎಪಿಎಂಸಿ ಬಳಿ ಹಣವಿರಲಿಲ್ಲ. ನ್ಯಾಯಾಲಯ ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಬಂಧನ ವಾರಂಟ್ ಹೊರಡಿಸಲು ಮುಂದಾಗಿತ್ತು. ಬೇರೆ ಎಪಿಎಂಸಿಯಿಂದ ₹2.5 ಕೋಟಿ ಸಾಲ ಪಡೆದು ನ್ಯಾಯಾಲಯಕ್ಕೆ ಭರಣ ಮಾಡಲಾಗಿದೆ. ಈಗ ಎಪಿಎಂಸಿ ಹೆಸರಲ್ಲಿ ₹.289 ಕೋಟಿ ಸಾಲವಿದ್ದು ಮರುಪಾವತಿ ಮಾಡಲು ಆದಾಯ ಇಲ್ಲ. ಕೃಷಿ ಉತ್ಪನ್ನ ಮಾರಾಟ ಕರದಿಂದ ಗರಿಷ್ಠ ₹4.5 ಲಕ್ಷದವರೆಗೆ ಮಾತ್ರ ಆದಾಯ ಬರುತ್ತಿದೆ. ಕಾರವಾರದಲ್ಲಿ ಮೂರು ಮಳಿಗೆಗಳನ್ನು ಬಾಡಿಗೆ ನೀಡಲಾಗಿದೆ. ಅದರಿಂದ ಮಾಸಿಕ ಸುಮಾರು ₹13.5 ಸಾವಿರ ಬಾಡಿಗೆ ಸಿಗುತ್ತಿದೆ. ಅದೇ ಸಮಿತಿಯ ಆದಾಯವಾಗಿದೆ. ಹೊರ ಗುತ್ತಿಗೆ ಸಿಬ್ಬಂದಿಗೆ ವೇತನ ನೀಡಲು ₹47 ಸಾವಿರ ಬೇಕು. ಅದನ್ನೂ ಹೊಂದಿಸುವುದೂ ಕಷ್ಟವಾಗಿದೆ’ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.