ADVERTISEMENT

ಕಾರವಾರ: ‘ಅಮೋಘ’ ವಂಚನೆ; ಆರೋಪಿ ಬಂಧನ

ಕಾರವಾರದಲ್ಲಿ ಸಾರ್ವಜನಿಕರಿಂದ ₹ 12 ಲಕ್ಷ ಸಂಗ್ರಹಿಸಿ ಪರಾರಿಯಾಗಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 11:57 IST
Last Updated 22 ಮಾರ್ಚ್ 2021, 11:57 IST
ರಿಯಾಯಿತಿ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಕೊಡುವುದಾಗಿ ನಂಬಿಸಿ ಹಣ ಸಂಗ್ರಹಿಸಿ ಪರಾರಿಯಾದ ಆರೋಪಿಯನ್ನು ಕಾರವಾರ ಪೊಲೀಸರು ಬಂಧಿಸಿರುವುದು
ರಿಯಾಯಿತಿ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಕೊಡುವುದಾಗಿ ನಂಬಿಸಿ ಹಣ ಸಂಗ್ರಹಿಸಿ ಪರಾರಿಯಾದ ಆರೋಪಿಯನ್ನು ಕಾರವಾರ ಪೊಲೀಸರು ಬಂಧಿಸಿರುವುದು   

ಕಾರವಾರ: ಗೃಹೋಪಯೋಗಿ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ನಗರದ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿದ್ದ ಆರೋಪಿಗಳಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಂಜಾವೂರಿನ ಪಟ್ಟುಕೊಟ್ಟೈ ನಿವಾಸಿ ಶಿವರಾಜ ರಂಗರೆಸು (38) ಬಂಧಿತ ಆರೋಪಿ.

ನಗರದ ಕಾಜುಬಾಗ್‌ನ ವಾಣಿಜ್ಯ ಸಂಕೀರ್ಣವೊಂದರಲ್ಲಿ ‘ಅಮೋಘ ಟ್ರೇಡರ್ಸ್’ ಹೆಸರಿನಲ್ಲಿ ಫೆ.13ರಂದು ಮಳಿಗೆಯೊಂದು ಆರಂಭವಾಗಿತ್ತು. ಶೇ 45ರಷ್ಟು ರಿಯಾಯಿತಿ ದರದಲ್ಲಿ ಟಿ.ವಿ, ಫ್ರಿಜ್, ಸೋಫಾ, ಕಪಾಟು ಮುಂತಾದ ವಸ್ತುಗಳನ್ನು ಕೊಡುವುದಾಗಿ ಪ್ರಚಾರ ಮಾಡಲಾಗಿತ್ತು.

ಅದಕ್ಕೆ ಸಾರ್ವಜನಿಕರಿಂದ ಮುಂಗಡವಾಗಿ ಹಣ ಸಂಗ್ರಹಿಸಿದ್ದ ಆರೋಪಿಗಳು, ಆರಂಭದಲ್ಲಿ ಕೆಲವರಿಗೆ ವಸ್ತುಗಳನ್ನು ನೀಡಿ ವಿಶ್ವಾಸ ಗಿಟ್ಟಿಸಿಕೊಂಡಿದ್ದರು. ಇದನ್ನು ನಂಬಿದ 130ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿ ಹಣ ನೀಡಿದ್ದರು. ಈ ರೀತಿ ಜನರಿಂದ ಒಟ್ಟು ₹ 12 ಲಕ್ಷದಷ್ಟು ಮೊತ್ತವನ್ನು ಆರೋಪಿಗಳು ಸಂಗ್ರಹಿಸಿದ್ದರು. ಆದರೆ, ಮಾರ್ಚ್ 10ರ ನಂತರ ಮಳಿಗೆಯ ಬಾಗಿಲು ಮುಚ್ಚಿ, ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದರು.

ADVERTISEMENT

ಇದರಿಂದ ಅನುಮಾನಗೊಂಡ ಸಾರ್ವಜನಿಕರು ಮಾರ್ಚ್ 12ರಂದು ನಗರ ಠಾಣೆಗೆ ದೂರು ನೀಡಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.

ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ‘ಈ ತಂಡದಲ್ಲಿ ಒಟ್ಟು ಆರು ಮಂದಿ ಇರುವ ಮಾಹಿತಿಯಿದೆ. ಪ್ರಮುಖ ಆರೋಪಿಗಳಾದ ಮುತ್ತುರಾಮ, ಗೋಪಿ ಹಾಗೂ ಉಳಿದವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ. ಇವರ ವಿರುದ್ಧ ಮತ್ತೆಲ್ಲಾದರೂ ಈ ರೀತಿಯ ದೂರುಗಳಿವೆಯೇ ಎಂದು ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಆರೋಪಿಗಳು ಮತ್ತಷ್ಟು ಹಣ ಸಂಗ್ರಹಿಸುವ ಉದ್ದೇಶ ಹೊಂದಿದ್ದರು. ಆದರೆ, ತಮ್ಮ ಮೇಲೆ ಅನುಮಾನ ಬಂದಿರುವುದು ಗೊತ್ತಾಗುತ್ತಿದ್ದಂತೆ ಆರೋಪಿಗಳು ನಗರದಿಂದ ಪರಾರಿಯಾದರು. ಅವರ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ತಂದಿದ್ದ ವಸ್ತುಗಳು ಗೋದಾಮಿನಲ್ಲಿವೆ. ಅವುಗಳನ್ನೂ ವಶ ಪಡಿಸಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ ಶೆಟ್ಟಿ, ನಗರ ಠಾಣೆ ಪಿ.ಎಸ್.ಐ. ಸಂತೋಷ ಕುಮಾರ.ಎಂ., ನರಸಿಂಹ ವಾಗ್ರೇಕರ, ಸಿಬ್ಬಂದಿ ಸತ್ಯಾನಂದ ನಾಯ್ಕ, ರಾಜೇಶ ನಾಯಕ, ರಾಮ ನಾಯ್ಕ ಹಾಗೂ ಉಲ್ಲಾಸ ನಾಯ್ಕ ಭಾಗವಹಿಸಿದ್ದರು.

* ನಂಬಿಕೆಗೆ ಅರ್ಹವಲ್ಲದ ರಿಯಾಯಿತಿ ದರದ ಮಾರಾಟ, ಚೈನ್ ಲಿಂಕ್‌ ವ್ಯವಹಾರಗಳ ಬಗ್ಗೆ ಜನ ಎಚ್ಚರ ವಹಿಸಬೇಕು. ಅನುಮಾನಾಸ್ಪದ ಸಂದರ್ಭದಲ್ಲಿ ಪೊಲೀಸರ ಗಮನಕ್ಕೆ ತರಬೇಕು.

– ಶಿವಪ್ರಕಾಶ ದೇವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ದರೋಡೆಗೆ ಸಂಚು: ಬಂಧನ

ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳ ದರೋಡೆ ಮಾಡುತ್ತಿದ್ದ ತಂಡವನ್ನು ನಗರ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಭಾನುವಾರ ತಡರಾತ್ರಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಶಿಕಾರಿಪುರದ ಆಸಿಫ್ (35) ಬಂಧಿತ ಆರೋಪಿ. ಶಿಕಾರಿಪುರ ಮತ್ತು ಭದ್ರಾವತಿಯ ಐವರು ತಂಡ ಕಟ್ಟಿಕೊಂಡು ದರೋಡೆ ಮಾಡುತ್ತಿದ್ದರು. ಇದೇರೀತಿ, ಕೃತ್ಯವೊಂದಕ್ಕೆ ಸಂಚು ರೂಪಿಸಿ ಕಾರಿನಲ್ಲಿ ಕಾರವಾರಕ್ಕೆ ಬಂದಿದ್ದರು. ಬೈತಖೋಲ್ ಸಮೀಪ ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕಿದ್ದರು. ಈ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದಾಗ ಕಾರು ಚಾಲಕ ಆಸಿಫ್ ಸೆರೆ ಸಿಕ್ಕಿದ್ದು, ಉಳಿದವರು ಪರಾರಿಯಾದರು.

ಈ ಬಗ್ಗೆ ಮಾಹಿತಿ ನೀಡಿದ ಶಿವಪ್ರಕಾಶ ದೇವರಾಜು, ‘ಕಾರವಾರದ ಸಂತೆ ಸೇರಿದಂತೆ ಜನಸಂದಣಿಯ ಪ್ರದೇಶಗಳಲ್ಲಿ ಆರೋಪಿಗಳು ಮೊಬೈಲ್ ಕಳವು ಮಾಡುತ್ತಿದ್ದರು. ಆರೋಪಿಗಳಿಂದ ಎರಡು ಕಬ್ಬಿಣದ ಕತ್ತಿಗಳು, ಎರಡು ದೊಣ್ಣೆಗಳು, ಎರಡು ನೈಲಾನ್ ಹಗ್ಗ ಹಾಗೂ ಖಾರದ ಪುಡಿಯನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಪೊಲೀಸ್ ಕಾರ್ಯಾಚರಣೆಯ ತಂಡದಲ್ಲಿ ಪಿ.ಎಸ್.ಐ ಸಂತೋಷ ಕುಮಾರ.ಎಂ, ಸಿಬ್ಬಂದಿ ಸುಧೀರ ನಾಯ್ಕ, ದರ್ಶನ್ ಪವಾರ್, ರಾಜೇಶ ನಾಯಕ, ಹರೀಶ ಗಾವಣಿಕರ್, ಹನುಮಂತ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.