ADVERTISEMENT

ಅರಬ್ಬಿ ಸಮುದ್ರದ ಅಬ್ಬರ: ಕಿನಾರೆ ತತ್ತರ

ಅಬ್ಬರಿಸುತ್ತಿರುವ ಅರಬ್ಬಿ ಸಮುದ್ರ: ಮರಳು, ಮಣ್ಣು, ಮರಗಳು ನೀರು ಪಾಲು

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 9:50 IST
Last Updated 27 ಜೂನ್ 2021, 9:50 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹಾನಿಯಾಗಿರುವುದು
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಹಾನಿಯಾಗಿರುವುದು   

ಕಾರವಾರ: ಮುಂಗಾರು ಮಳೆ ಜೋರಾಗುತ್ತಿದ್ದಂತೆ ಕರಾವಳಿಯಲ್ಲಿ ಸಮುದ್ರ ಕೊರೆತವೂ ಹೆಚ್ಚಾಗುತ್ತಿದೆ. ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ವಿವಿಧೆಡೆ ಮರಗಳು, ಕಿನಾರೆಯ ಮರಳು ನೀರು ಪಾಲಾಗುತ್ತಿವೆ.

ನಗರಕ್ಕೆ ಭೇಟಿ ನೀಡುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಕಡಲತೀರದ ಸುಮಾರು ಎರಡು ಕಿಲೋಮೀಟರ್ ಉದ್ದಕ್ಕೂ ಈ ಬಾರಿ ಸಮುದ್ರದ ಅಲೆಗಳ ಅಬ್ಬರ ಸಾಕಷ್ಟು ಹಾನಿಯುಂಟು ಮಾಡಿದೆ. ಯುದ್ಧ ನೌಕೆ ವಸ್ತು ಸಂಗ್ರಹಾಲಯದ ಬಳಿ, ಹೋಟೆಲ್ ಹಿಂಭಾಗ ಗಾಳಿ ಮರಗಳ ಬದಿಯಲ್ಲಿ ಅಳವಡಿಸಲಾಗಿದ್ದ ಆವರಣ ಗೋಡೆ, ಆಂಜನೇಯ ಗುಡಿಯ ಎದುರು, ಶಿಲ್ಪೋದ್ಯಾನದ ಹಿಂದೆ, ದಿವೇಕರ್ ಕಾಲೇಜು ಮತ್ತು ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಹಿಂದೆ ಮಣ್ಣು, ಮರಳು ಕೊಚ್ಚಿಕೊಂಡು ಹೋಗಿವೆ.

ಕಳೆದ ತಿಂಗಳು ಅಪ್ಪಳಿಸಿ ‘ತೌತೆ’ ಚಂಡಮಾರುತದಿಂದ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿತ್ತು. ಅದರ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಮುಂಗಾರು ಮಾರುತಗಳು ಬೀಸಲಾರಂಭಿಸಿದವು. ಹೀಗಾಗಿ ಒಂದು ತಿಂಗಳಿಗೂ ಅಧಿಕ ಸಮಯದಿಂದ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುತ್ತಿವೆ.

ADVERTISEMENT

ಟ್ಯಾಗೋರ್ ಕಡಲತೀರದಲ್ಲಿ ಕೆಲವು ವರ್ಷಗಳ ಹಿಂದೆ ಇದ್ದ ಮನೋರಂಜನಾ ರೈಲಿನ ಹಳಿಗಳನ್ನು ಆಂಜನೇಯ ಗುಡಿಯ ಸಮೀಪ ಕಲ್ಲಿನ ರಾಶಿಯ ಮೇಲೆ ಇಡಲಾಗಿದೆ. ಕೆಲವು ದಿನಗಳಿಂದ ಅಲೆಗಳ ನಿರಂತರ ಹೊಡೆತಕ್ಕೆ ಕಲ್ಲುಗಳು ನೀರು ಪಾಲಾಗಿವೆ. ಅದರ ಸಮೀಪದಲ್ಲಿ ವಾಯು ವಿಹಾರಿಗಳಿಗೆ ನೆರಳಿಗಾಗಿ ಅಳವಡಿಸಲಾಗಿದ್ದ ಶೀಟ್‌ಗಳು, ಕಂಬಗಳು ಈಗಾಗಲೇ ನೆಲಸಮವಾಗಿವೆ. ಅಲ್ಲಿರುವ ಹಳಿಗಳನ್ನು ತಕ್ಷಣ ತೆರವು ಮಾಡದಿದ್ದರೆ ಅವು ಸಮುದ್ರ ಸೇರುವ ಸಾಧ್ಯತೆಯಿದೆ.

ಶಿಲ್ಪ ಉದ್ಯಾನದ ಹಿಂಭಾಗ ಚರಂಡಿ ನೀರು ಸಮುದ್ರ ಸೇರಲು ಭಾರಿ ಗಾತ್ರದ ಅಲೆಗಳು ಅಡ್ಡಿಯಾಗುತ್ತಿವೆ. ಹಾಗಾಗಿ ಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕಡಲತೀರದುದ್ದಕ್ಕೂ ಮರಳು ಕೊಚ್ಚಿ ಹೋಗಿದ್ದು, ಅಲ್ಲಲ್ಲಿ ಗಾಳಿ ಮರಗಳು, ಹೊಂಗೆ ಗಿಡಗಳು ಉರುಳಿವೆ.

ಟ್ಯಾಗೋರ್ ಕಡಲತೀರದಲ್ಲಿ ಮುಂಜಾನೆ ಮತ್ತು ಸಂಜೆ ಸೂರ್ಯಾಸ್ತದ ವೇಳೆ ನೂರಾರು ಮಂದಿ ವಾಯು ವಿಹಾರ ಮಾಡುತ್ತಿದ್ದರು. ಕಾಳಿ ನದಿ ಸಂಗಮದವರೆಗೂ ನಡೆದುಕೊಂಡು ಹೋಗುತ್ತಿದ್ದರು. ಆದರೆ, ಅಬ್ಬರಿಸುತ್ತಿರುವ ಕಡಲಿನ ಅಲೆಗಳು ನೇರವಾಗಿ ದಡಕ್ಕೇ ಅಪ್ಪಳಿಸುತ್ತಿರುವ ಕಾರಣ ವಾಯುವಿಹಾರಕ್ಕೆ ಸಾಧ್ಯವೇ ಇಲ್ಲ ಎಂಬಂತಾಗಿದೆ.

‘ಶಾಶ್ವತ ಪರಿಹಾರ ಬೇಕು’:ಪ್ರತಿ ಮಳೆಗಾಲದಲ್ಲೂ ಕಡಲ್ಕೊರೆತ ಕಾರವಾರವನ್ನು ಕಾಡುತ್ತದೆ. ಹೆಚ್ಚು ಪ್ರವಾಸಿಗರನ್ನು ಸೆಳೆಯುವ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಶಾಶ್ವತವಾದ ಪರಿಹಾರ ಕಾಮಗಾರಿ ರೂಪಿಸಬೇಕು ಎಂಬುದು ಸ್ಥಳೀಯ ನಿವಾಸಿ ರಮೇಶ ನಾಯ್ಕ ಅವರ ಆಗ್ರಹವಾಗಿದೆ.

ಸಮುದ್ರದ ಅಲೆಗಳು ವರ್ಷದಿಂದ ವರ್ಷಕ್ಕೆ ಮುಂದೆ ಬರುತ್ತಿವೆ. ತಾತ್ಕಾಲಿಕವಾಗಿ ಕಲ್ಲು ಹಾಕುವುದರಿಂದ ಪ್ರಯೋಜನವಿಲ್ಲ. ಇದರಿಂದ ಅಪಾರ ನೈಸರ್ಗಿಕ ಸಂಪತ್ತು ನಷ್ಟವಾಗುತ್ತಿದೆ. ಇದನ್ನು ತಡೆಯಲು, ನಗರವನ್ನು ಮತ್ತಷ್ಟು ಸುಂದರವಾಗಿಸಲು ಕ್ರಮ ಅಗತ್ಯ ಎಂಬುದು ಅವರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.